Kalaburagi | ಗ್ರಾಮೀಣ ಅಭಿವೃದ್ಧಿ ಕಾರ್ಯಗಳಿಗೆ ಶ್ರೀ ಸಿಮೆಂಟ್ ಕೊಡ್ಲಾ ಘಟಕಕ್ಕೆ ಎಫ್‌ಕೆಸಿಸಿಐ ಪ್ರಶಸ್ತಿ

ಕಲಬುರಗಿ: ಗ್ರಾಮೀಣ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಕೈಗೊಂಡಿರುವ ವಿವಿಧ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಕಾರ್ಯಕ್ರಮಗಳಿಗಾಗಿ ಶ್ರೀ ಸಿಮೆಂಟ್ ಲಿಮಿಟೆಡ್‌ನ ಕೊಡ್ಲಾ ಘಟಕವು ಗ್ರಾಮೀಣ ಅಭಿವೃದ್ಧಿಯಲ್ಲಿ ಶ್ರೇಷ್ಠತೆಗಾಗಿ ಎಫ್‌ಕೆಸಿಸಿಐ ಪ್ರಶಸ್ತಿಗೆ ಭಾಜನವಾಗಿದೆ.
ಬೆಂಗಳೂರಿನಲ್ಲಿ ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಕೆಸಿಸಿಐ) ಆಯೋಜಿಸಿದ್ದ ಇಂಡಿಯಾ ಸಿಎಸ್‌ಆರ್ ಮತ್ತು ಸುಸ್ಥಿರತೆ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಂಪನಿಯ ಪರವಾಗಿ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ವಿಷಾಲ್ ಭಾರದ್ವಾಜ್ ಹಾಗೂ ಕೊಡ್ಲಾ ಘಟಕದ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ರಮಣ ಗೌಡ ಪ್ರಶಸ್ತಿ ಸ್ವೀಕರಿಸಿದರು.
ಶ್ರೀ ಫೌಂಡೇಶನ್ ಟ್ರಸ್ಟ್ ಮೂಲಕ ಕೊಡ್ಲಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಂಪನಿಯು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಗಳು, ಗ್ರಾಮ ಪಂಚಾಯಿತಿ ಕಟ್ಟಡಗಳು, ಅಂಗನವಾಡಿ ಕೇಂದ್ರಗಳು ಹಾಗೂ ಸಮುದಾಯ ಭವನಗಳ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸೌರಶಕ್ತಿ ಆಧಾರಿತ ಬೀದಿ ದೀಪಗಳ ಅಳವಡಿಕೆಗೆ ಆದ್ಯತೆ ನೀಡಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಕೊಡ್ಲಾ ಮತ್ತು ದೋಣಗಾಂವ್ ಗ್ರಾಮಗಳ ಮೂರು ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಿನಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದ 835 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ವಿಜ್ಞಾನ ಕಲಿಕೆಗೆ ಅವಕಾಶ ದೊರೆತಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದ 80ಕ್ಕೂ ಹೆಚ್ಚು ಮಾದರಿಗಳನ್ನು ಅಳವಡಿಸಲಾಗಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳು, ಶಾಲಾ ಬ್ಯಾಗ್‌ಗಳು ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಮಹಿಳಾ ಸಬಲೀಕರಣದ ಭಾಗವಾಗಿ 64 ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗಿದೆ. ಅವರಲ್ಲಿ 45 ಮಹಿಳೆಯರು ಸ್ವಂತ ಉದ್ಯೋಗದ ಮೂಲಕ ಪ್ರತಿ ತಿಂಗಳು 1,000 ರೂ. ರಿಂದ 6,000 ರೂ. ವರೆಗೆ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ ಹಾಗೂ ಕುಟುಂಬದ ಆರ್ಥಿಕ ಸ್ಥಿರತೆ ಹೆಚ್ಚಿಸಲು ನೆರವಾಗಿದೆ.
ಪರಿಸರ ಸಂರಕ್ಷಣೆಯ ಉದ್ದೇಶದಿಂದ 2025ರ ಅಕ್ಟೋಬರ್‌ನಲ್ಲಿ 220 ಸಸಿಗಳನ್ನು ನೆಟ್ಟು ಟ್ರೀ ಗಾರ್ಡ್‌ಗಳನ್ನು ಅಳವಡಿಸಲಾಗಿದೆ. ಗ್ರಾಮಸ್ಥರ ಸಹಭಾಗಿತ್ವದಲ್ಲಿ ಸಸಿಗಳ ಆರೈಕೆ ಮಾಡಲಾಗುತ್ತಿದ್ದು, ಕೇವಲ 10 ತಿಂಗಳಲ್ಲಿ ಅವು ಸರಾಸರಿ 8 ಅಡಿ ಎತ್ತರಕ್ಕೆ ಬೆಳೆದಿವೆ. ಕೆಲವು ಸಸಿಗಳು 10ರಿಂದ 12 ಅಡಿ ಎತ್ತರ ತಲುಪಿವೆ.
ಇದರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳು, ಸ್ವಚ್ಛತಾ ಕಾರ್ಯಕ್ರಮಗಳು, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಪೂರೈಕೆ, ಸ್ವಸಹಾಯ ಸಂಘಗಳ ಸದಸ್ಯರಿಗೆ ಉದ್ಯೋಗ ತರಬೇತಿ, ವಿಶೇಷಚೇತನರಿಗೆ ನೆರವು ಹಾಗೂ ಯುವಜನರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆ, ಶಿಕ್ಷಣದ ಗುಣಮಟ್ಟ ಹೆಚ್ಚಳ, ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆಯನ್ನು ಗುರಿಯಾಗಿಸಿಕೊಂಡು ಹಮ್ಮಿಕೊಂಡಿರುವ ಈ ಕಾರ್ಯಕ್ರಮಗಳಿಗೆ ದೊರೆತ ಪ್ರಶಸ್ತಿಯು ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಕಾರ್ಯಗಳಿಗೆ ಸಂದ ಮನ್ನಣೆಯಾಗಿದೆ.






