Kalaburagi | ಕೆಬಿಎನ್ ವಿವಿಯಲ್ಲಿ ಫೋಲ್ಡ್‌ಸ್ಕೋಪ್ ತಂತ್ರಜ್ಞಾನ ಕಾರ್ಯಾಗಾರ

ಕಲಬುರಗಿ: ಖ್ವಾಜಾ ಬಂದೇ ನವಾಝ್ (ಕೆಬಿಎನ್) ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದ ಪ್ರಾಣಿಶಾಸ್ತ್ರ ಹಾಗೂ ಸಸ್ಯಶಾಸ್ತ್ರ ವಿಭಾಗಗಳ ಜಂಟಿ ಆಶ್ರಯದಲ್ಲಿ “ಫೋಲ್ಡ್‌ಸ್ಕೋಪ್: ಸೂಕ್ಷ್ಮಜಗತ್ತಿನ ಅನ್ವೇಷಣೆಗೆ ಕೈಗೆಟುಕುವ ಸಾಧನ” ಕುರಿತು ಬುಧವಾರ ವಿಶೇಷ ಕಾರ್ಯಾಗಾರ ನಡೆಯಿತು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕುತೂಹಲ ಬೆಳೆಸುವುದು ಹಾಗೂ ಕಡಿಮೆ ವೆಚ್ಚದ ಸೂಕ್ಷ್ಮದರ್ಶಕ ತಂತ್ರಜ್ಞಾನದ ಪ್ರಾಯೋಗಿಕ ಬಳಕೆಯ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿ ಪ್ರೊ. ಸೈಯದ್ ಅಶ್ಫಾಕ್ ಅಹ್ಮದ್, ಪ್ರಾಯೋಗಿಕ ಕಲಿಕೆ ಮತ್ತು ಸೂಕ್ಷ್ಮಜಗತ್ತಿನ ಅನ್ವೇಷಣೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಪೂರಕವಾಗಿದ್ದು, ಇಂತಹ ಕೈಗೆಟುಕುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ.ಸುದರ್ಶನ್ ಅವರು ಫೋಲ್ಡ್‌ಸ್ಕೋಪ್‌ನ ತತ್ವ, ಕಾರ್ಯನಿರ್ವಹಣೆ ಹಾಗೂ ಅದರ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸೈಯದ್ ಅಬ್ರಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸದ ಬಳಿಕ ನಡೆದ ಪ್ರಾಯೋಗಿಕ ತರಬೇತಿಯಲ್ಲಿ ಫೋಲ್ಡ್‌ಸ್ಕೋಪ್ ಜೋಡಣೆ, ನಿರ್ವಹಣೆ ಮತ್ತು ಸೂಕ್ಷ್ಮ ವೀಕ್ಷಣೆಯ ವಿಧಾನಗಳನ್ನು ಡಾ. ಸುದರ್ಶನ್ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಸ್ವತಃ ಸಾಧನ ಜೋಡಿಸಿ ಸೂಕ್ಷ್ಮ ವೀಕ್ಷಣೆ ನಡೆಸುವ ಮೂಲಕ ನೇರ ಅನುಭವ ಪಡೆದರು. ಕಾರ್ಯಾಗಾರದಲ್ಲಿ ವಿಜ್ಞಾನ ವಿಭಾಗದ ಬೋಧಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 105 ಮಂದಿ ಭಾಗವಹಿಸಿದ್ದರು.
ಖಿರಾಅತ್‌ನೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರೊಮಾನಾ ಮಿರ್ಧೆ ಸ್ವಾಗತಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಹೀನಾ ಮುಬೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಮೀನಾ ಮೆಹ್ರೀನ್ ಮತ್ತು ಜೈನಬ್ ಫಾತಿಮಾ ಕಾರ್ಯಕ್ರಮ ನಿರೂಪಿಸಿದರೆ, ಡಾ. ಸಾದಾತ್ ಅಲಿ ವಂದಿಸಿದರು.






