Kalaburagi | ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಸಂಪಾದಕರ ಸಂಘ ಜಿಲ್ಲಾ ಘಟಕ ರಚನೆ

ಕಲಬುರಗಿ: ರಾಜ್ಯದ ಸಣ್ಣ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳ ಹಕ್ಕುಗಳ ರಕ್ಷಣೆ, ಪತ್ರಕರ್ತರ ವೃತ್ತಿಪರ ಹಿತಾಸಕ್ತಿ ಮತ್ತು ಸಂಘಟನೆಯ ಬಲವರ್ಧನೆಗೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಸಂಪಾದಕರ ಸಂಘದ ಕಲಬುರಗಿ ಜಿಲ್ಲಾ ಘಟಕವನ್ನು ಅಧಿಕೃತವಾಗಿ ರಚಿಸಲಾಯಿತು.
ನಗರದಲ್ಲಿ ನಡೆದ ಸಭೆಯು ನಿಕಟಪೂರ್ವ ರಾಜ್ಯಾಧ್ಯಕ್ಷ ಸಿದ್ದು ಸುಬೇದಾರ, ರಾಜ್ಯ ಉಪಾಧ್ಯಕ್ಷ ಆನಂದ ಪಿ. ಮಣ್ಣೂರ್ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುರಾಜ ಜಯಪ್ರಕಾಶ್ ಕುಲಕರ್ಣಿ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲೆಯ ವಿವಿಧ ಸಣ್ಣ ಹಾಗೂ ಜಿಲ್ಲಾ ಪತ್ರಿಕೆಗಳ ಸಂಪಾದಕರು ಮತ್ತು ಹಿರಿಯ ಪತ್ರಕರ್ತರು ಭಾಗವಹಿಸಿ, ಸಣ್ಣ ಪತ್ರಿಕೆಗಳು ಎದುರಿಸುತ್ತಿರುವ ಸವಾಲುಗಳು, ಮಾಧ್ಯಮ ಕ್ಷೇತ್ರದಲ್ಲಿನ ಬದಲಾವಣೆಗಳು, ಪತ್ರಕರ್ತರ ಹಕ್ಕುಗಳ ರಕ್ಷಣೆ ಹಾಗೂ ಸಂಘಟನೆಯ ಬಲವರ್ಧನೆ ಕುರಿತು ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು :
ಅಧ್ಯಕ್ಷರಾಗಿ ಅಜೀಜ ಉಲ್ಲಾ ಸರ್ಮಸ್ತ್, ಉಪಾಧ್ಯಕ್ಷರಾಗಿ ಚಂದ್ರಕಾಂತ್ ಬಿರಾದಾರ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಕಾಂತ್ ಹಾವನೂರು, ಖಜಾಂಚಿಯಾಗಿ ಅವಿನಾಶ್ ಕೊಲ್ಲೂರ್, ಜಂಟಿ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದನಗೌಡ ಯಡ್ಡಳ್ಳಿ ಹಾಗೂ ಕಾರ್ಯದರ್ಶಿಗಳಾಗಿ ಭರತ್ ಅಮಿತ್ಕಲ್ ಮತ್ತು ವಿಜಯಕುಮಾರ್ ಚಿಡಿಗಿ ಆಯ್ಕೆಯಾದರು. ಸಂಘದ ಮಾರ್ಗದರ್ಶನ ಮಂಡಳಿಗೆ ನಿಕಟಪೂರ್ವ ರಾಜ್ಯಾಧ್ಯಕ್ಷ ಸಿದ್ದು ಸುಭೆಧಾರ್ ಹಾಗೂ ಹಿರಿಯ ಪತ್ರಕರ್ತ ಶರಣಪ್ಪ ಜಿಡಗಾ ಅವರನ್ನು ಆಯ್ಕೆ ಮಾಡಲಾಯಿತು.
ಸಂಘದ ಮಾರ್ಗದರ್ಶನ ಮಂಡಳಿಗೆ ನಿಕಟಪೂರ್ವ ರಾಜ್ಯಾಧ್ಯಕ್ಷ ಸಿದ್ದು ಸುಬೇದಾರ ಹಾಗೂ ಹಿರಿಯ ಪತ್ರಕರ್ತ ಶರಣಪ್ಪ ಜಿಡಗಾ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಮುಖಂಡರು, ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳು ಸಮಾಜದ ನೈಜ ಸಮಸ್ಯೆಗಳನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಪತ್ರಕರ್ತರ ಹಕ್ಕುಗಳ ರಕ್ಷಣೆ, ಮಾಧ್ಯಮ ಸ್ವಾತಂತ್ರ್ಯದ ಸಂರಕ್ಷಣೆ, ವೃತ್ತಿಪರ ತರಬೇತಿ ಹಾಗೂ ಸಣ್ಣ ಪತ್ರಿಕೆಗಳ ಅಭಿವೃದ್ಧಿಗೆ ಸಂಘ ಆದ್ಯತೆ ನೀಡಲಿದೆ ಎಂದು ಹೇಳಿದರು.
ನೂತನ ಅಧ್ಯಕ್ಷ ಅಜೀಜ ಉಲ್ಲಾ ಸರ್ಮಸ್ತ್ ಮಾತನಾಡಿ, ಜಿಲ್ಲೆಯ ಎಲ್ಲ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಪಾದಕರನ್ನು ಒಂದೇ ವೇದಿಕೆಯಡಿ ಸಂಘಟಿಸಿ, ಸಂಘವನ್ನು ಮಾದರಿ ಸಂಘಟನೆಯಾಗಿ ಬೆಳೆಸುವುದರ ಜೊತೆಗೆ ಪತ್ರಕರ್ತರ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ನಿರಂತರವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡ ಸಂಪಾದಕರು ಹಾಗೂ ಪತ್ರಕರ್ತರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಸಂಘದ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.






