ಕಲಬುರಗಿ | ಪ್ರವಾಹ ಪೀಡಿತ ಗ್ರಾಮಗಳಿಗೆ ಮಾಜಿ ಸಂಸದ ಡಾ.ಉಮೇಶ ಜಾಧವ್ ಭೇಟಿ

ಕಲಬುರಗಿ : ಮಹಾರಾಷ್ಟ್ರದ ಉಜನಿ, ವೀರ ಮತ್ತು ಸೀನಾ ಜಲಾಶಯದಿಂದ 3.50 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿದ ಬಿಟ್ಟಿರುವುದರಿಂದ ನದಿ ದಡದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದ್ದು, ನೂರಾರು ಮನೆಗಳು ಮತ್ತು ಜಮೀನುಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಶನಿವಾರ, ಪ್ರವಾಹ ಪೀಡಿತ ದೇವಲ, ಗಾಣಗಾಪುರ ಮತ್ತು ಸೊನ್ನ ಬ್ಯಾರೇಜ್ ಪ್ರದೇಶಗಳಿಗೆ ಭೇಟಿ ನೀಡಿದ ಲೋಕಸಭಾ ಮಾಜಿ ಸಂಸದ ಡಾ. ಉಮೇಶ ಜಾಧವ್, ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅನಂತರ ಅಫಜಲಪುರ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ ಮಳೆ ಮತ್ತು ಪ್ರವಾಹದಿಂದ ಮನೆಗಳು, ಶಾಲಾಕಾಲೇಜುಗಳು, ಧಾರ್ಮಿಕ ಕ್ಷೇತ್ರಗಳು ಮುಳುಗಿದ್ದರೂ ಸರಕಾರದಿಂದ ಜನರಿಗೆ ಪರಿಹಾರ ಒದಗಿಸಲಾಗಿಲ್ಲ ಎಂದು ಆರೋಪಿಸಿದರು.
ತಕ್ಷಣ ಅತಿವೃಷ್ಟಿ ಘೋಷಣೆ, ಚುನಾವಣಾ ಪರಿಹಾರ ನಿಧಿ ಬಿಡುಗಡೆ, ಬೆಳೆ ವಿಮೆ ಹಾಗೂ ಸಾಲ ಮನ್ನಾ ಸೇರಿದಂತೆ ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್, ಬಿಜೆಪಿ ಕಲಬುರಗಿ ನಗರ ಅಧ್ಯಕ್ಷ ಚಂದು ಪಾಟೀಲ್, ಅಶೋಕ್ ಬಗಲಿ, ಅವ್ವಣ್ಣ ಮ್ಯಾಕೇರಿ, ಮಲ್ಲಿಕಾರ್ಜುನ ಲಿಂಗದಳ್ಳಿ, ವಿಜಯಕುಮಾರ ದೇಸಾಯಿ ಮತ್ತು ಸುನೀಲ್ ಶೆಟ್ಟಿ ಹಾಜರಿದ್ದವರು.







