ಕಲಬುರಗಿ | ಪ್ರತಿಭಾವಂತ 10 ವಿದ್ಯಾರ್ಥಿನಿಯರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಉಚಿತ ಶಿಕ್ಷಣ, ವಸತಿ ಸೌಲಭ್ಯ

ಕಲಬುರಗಿ: ಆರ್ಥಿಕ ಸಂಕಷ್ಟದ ಕಾರಣದಿಂದ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸುವ ಪರಿಸ್ಥಿತಿಯಲ್ಲಿದ್ದ ಕಸ್ತೂರ್ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ 10 ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಸಂಪೂರ್ಣ ಉಚಿತ ಶಿಕ್ಷಣ ಹಾಗೂ ಉಚಿತ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಮಾನವೀಯ ಸೇವೆಯ ಮಾದರಿಯಾಗಿದೆ.
ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ 8ನೇ ತರಗತಿ ಪೂರ್ಣಗೊಳಿಸಿ, ನಿರಂತರವಾಗಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೂ ಕುಟುಂಬದ ಆರ್ಥಿಕ ದುಸ್ಥಿತಿಯಿಂದ ಮುಂದಿನ ಶಿಕ್ಷಣದ ಕನಸು ಕೈಚೆಲ್ಲುವ ಹಂತಕ್ಕೆ ಬಂದಿದ್ದ ವಿದ್ಯಾರ್ಥಿನಿಯರಿಗೆ ಸಂಘದ ಅಧ್ಯಕ್ಷೆ ಹಾಗೂ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಆಶಾಕಿರಣವಾಗಿದ್ದಾರೆ.
ಈ ವಿದ್ಯಾರ್ಥಿನಿಯರ ಸಂಕಷ್ಟವನ್ನು ಕಸ್ತೂರ್ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯೊಬ್ಬಳ ತಾಯಿಯಾದ ಸವಿತಾ ಅವರು ಡಾ. ದಾಕ್ಷಾಯಿಣಿ ಅವ್ವಾಜಿ ಅವರ ಗಮನಕ್ಕೆ ತಂದಿದ್ದರು. ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿನಿಯರ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿ, ಅವರ ವಿದ್ಯಾಭ್ಯಾಸ ಮುಂದುವರಿಸಲು ನೆರವು ನೀಡುವಂತೆ ಮನವಿ ಮಾಡಿದ್ದರು.
ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ 8ನೇ ತರಗತಿವರೆಗೆ ಮಾತ್ರ ಶಿಕ್ಷಣದ ವ್ಯವಸ್ಥೆ ಇರುವುದರಿಂದ 9ನೇ ತರಗತಿಯಿಂದ ವಿದ್ಯಾರ್ಥಿನಿಯರು ಬೇರೆ ಶಾಲೆಗಳಿಗೆ ಸೇರ್ಪಡೆಯಾಗಬೇಕಾಗುತ್ತದೆ. ಆದರೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಈ ವಿದ್ಯಾರ್ಥಿನಿಯರ ಕುಟುಂಬಗಳಿಗೆ ಖಾಸಗಿ ಶಾಲೆಗಳ ವೆಚ್ಚ ಭರಿಸುವುದು ಅಸಾಧ್ಯವಾಗಿದ್ದು, ಸರ್ಕಾರಿ ಶಾಲೆಗಳಿಗೆ ಸೇರುವುದು ಅಥವಾ ಶಿಕ್ಷಣವನ್ನೇ ನಿಲ್ಲಿಸುವ ಪರಿಸ್ಥಿತಿ ಎದುರಾಗಿತ್ತು.
ವಿದ್ಯಾರ್ಥಿನಿಯರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿದ ಡಾ. ದಾಕ್ಷಾಯಿಣಿ ಅವ್ವಾಜಿ ಅವರು, ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಸಮ್ಮುಖದಲ್ಲಿ ವಿದ್ಯಾರ್ಥಿನಿಯರೊಂದಿಗೆ ಹಾಗೂ ಅವರ ಪೋಷಕರೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ತಿಳಿದುಕೊಂಡರು. ಬಳಿಕ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಪ್ರಥಮ ಪುಣ್ಯಸ್ಮರಣೆಯ ಅಂಗವಾಗಿ ಆರಂಭಿಸಿರುವ ವಿಶೇಷ ಯೋಜನೆಯಡಿ ಈ ಹತ್ತು ವಿದ್ಯಾರ್ಥಿನಿಯರಿಗೆ ಸಂಪೂರ್ಣ ಉಚಿತ ಶಿಕ್ಷಣ ಹಾಗೂ ಉಚಿತ ವಸತಿ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸಿದರು.
ಈ ಕುರಿತು ಮಾತನಾಡಿದ ಡಾ. ದಾಕ್ಷಾಯಿಣಿ ಅವ್ವಾಜಿ ಅವರು, ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರತಿವರ್ಷವೂ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಸ್ಮರಣಾರ್ಥ ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯವನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ನೀಡಲಾಗುವುದು ಎಂದು ತಿಳಿಸಿದರು.
ಈ ವಿದ್ಯಾರ್ಥಿನಿಯರ ಕುಟುಂಬಗಳು ಕೃಷಿ ಕೂಲಿ ಕಾರ್ಮಿಕರು, ಹೋಟೆಲ್‌ಗಳಲ್ಲಿ ಸಾಮಾನ್ಯ ಕಾರ್ಮಿಕರು, ಆಟೋರಿಕ್ಷಾ ಚಾಲಕರು ಹಾಗೂ ದಿನಗೂಲಿ ಕೆಲಸಗಾರರ ಕುಟುಂಬಗಳಾಗಿವೆ. ಕೆಲವು ವಿದ್ಯಾರ್ಥಿನಿಯರು ವಿಧವಾ ತಾಯಂದಿರ ಮಕ್ಕಳಾಗಿದ್ದು, ಅವರ ತಾಯಂದಿರು ಮನೆ ಕೆಲಸ ಮಾಡಿ ಕುಟುಂಬವನ್ನು ನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ವಿದ್ಯಾರ್ಥಿನಿಯರಿಗೆ ಮಹಾದೇವಿ ಬಾಲಕಿಯರ ಪ್ರೌಢಶಾಲೆಯ 9ನೇ ತರಗತಿಯಲ್ಲಿ ಪ್ರವೇಶ ಕಲ್ಪಿಸಲಾಗಿದ್ದು, ಅಪ್ಪಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿರುವ ಬಾಲಕಿಯರ ವಸತಿ ನಿಲಯದಲ್ಲಿ ವಾಸದ ವ್ಯವಸ್ಥೆ ಮಾಡಲಾಗಿದೆ. ಉಚಿತ ಶಿಕ್ಷಣ ಮತ್ತು ವಸತಿಯೊಂದಿಗೆ ಸಮವಸ್ತ್ರ, ಪಠ್ಯಪುಸ್ತಕಗಳು, ಪುಸ್ತಕಗಳು ಸೇರಿದಂತೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಅಲ್ಲದೆ ವಸತಿ ನಿಲಯದಿಂದ ಶಾಲೆಗೆ ಹಾಗೂ ಶಾಲೆಯಿಂದ ವಸತಿ ನಿಲಯಕ್ಕೆ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.






