Kalaburagi | ಗಾಂಧೀ ಸ್ಮೃತಿ, ಬೃಹತ್ ಜನಜಾಗೃತಿ ಸಮಾವೇಶ
ಧರ್ಮಸ್ಥಳ, ಶರಣಬಸವೇಶ್ವರ ಸಂಸ್ಥಾನ ಸಮಾಜ ಸೇವೆಯಲ್ಲಿ ಅಣ್ಣ-ತಮ್ಮಂದಿರಂತೆ : ದಾಕ್ಷಾಯಿಣಿ ಅಪ್ಪ

ಕಲಬುರಗಿ: ಧರ್ಮಸ್ಥಳ ಕ್ಷೇತ್ರ ಹಾಗೂ ಶರಣಬಸವೇಶ್ವರ ಸಂಸ್ಥಾನವು ದಾಸೋಹ ತತ್ವದಡಿ ಸಮಾಜ ಸೇವೆಯಲ್ಲಿ ಅಣ್ಣ-ತಮ್ಮಂದಿರಂತೆ ಕಾರ್ಯನಿರ್ವಹಿಸುತ್ತಿರುವ ಧಾರ್ಮಿಕ ಕೇಂದ್ರಗಳಾಗಿವೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಹಾಗೂ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್. ಅಪ್ಪ ಹೇಳಿದರು.
ನಗರದ ಶರಣಬಸವೇಶ್ವರ ದೇವಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಗಾಂಧೀ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಹಾಗೂ ಶರಣಬಸವೇಶ್ವರ ಸಂಸ್ಥಾನಗಳು ಶಿಕ್ಷಣ ಮತ್ತು ಸಮಾಜ ಸೇವೆಗೆ ಆದ್ಯತೆ ನೀಡಿ, ಕಾಯಕ ಹಾಗೂ ದಾಸೋಹದ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸುತ್ತಿವೆ. ಶರಣಬಸವೇಶ್ವರ ಸಂಸ್ಥೆಯ ಶಿಕ್ಷಣ ಸಂಸ್ಥೆಗಳಲ್ಲಿ 300ಕ್ಕೂ ಹೆಚ್ಚು ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದು, ವೈದ್ಯಕೀಯ ಶಿಕ್ಷಣಕ್ಕೂ ಅವಕಾಶ ದೊರೆಯುತ್ತಿದೆ. ಇದರಿಂದ ಸಾಮಾನ್ಯ ಕುಟುಂಬಗಳ ಮಕ್ಕಳು ವೈದ್ಯರಾಗುವ ಕನಸು ನನಸಾಗುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವ್ಯಸನಮುಕ್ತ ಸಮಾಜ ನಿರ್ಮಾಣ, ಗ್ರಾಮಾಭಿವೃದ್ಧಿ ಹಾಗೂ ರೈತರ ಸೇವೆಯ ಮೂಲಕ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಗಾಂಧೀಜಿಯವರ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜ ಸೇವೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಮನೆ ಹಂಚಿಕೆ, ಪಿಂಚಣಿ ಪತ್ರ, ವಿದ್ಯಾರ್ಥಿವೇತನ, ವಿಕಲಚೇತನರಿಗೆ ವೀಲ್‌ಚೇರ್, ಶೌರ್ಯ ವಿಪತ್ತು ಕಾರ್ಯಕರ್ತರಿಗೆ ಸಲಕರಣೆ ಹಾಗೂ ಸರ್ಕಾರಿ ಶಾಲೆಗೆ ಅಧ್ಯಾಪಕರ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಯಿತು.
ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಬೋಧಿಸಿದ ಸತ್ಯ, ಅಹಿಂಸೆ, ಸತ್ಯಾಗ್ರಹ ಹಾಗೂ ಗ್ರಾಮಸ್ವರಾಜ್ಯದ ತತ್ವಗಳು ಇಡೀ ಜಗತ್ತಿಗೆ ಆದರ್ಶವಾಗಿವೆ. ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿರದೆ ಸ್ವಾಭಿಮಾನಿ, ಸ್ವಾವಲಂಬಿ ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಚೇತನರಾಗಿದ್ದರು ಎಂದರು.
ಗಾಂಧೀಜಿಯವರ ಆಶಯದಂತೆ ದುಶ್ಚಟಮುಕ್ತ ಹಾಗೂ ಪಾನನಿಷೇಧದ ಸಮಾಜ ನಿರ್ಮಾಣವಾಗಬೇಕು. ಆದರೆ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜನಜಾಗೃತಿ ವೇದಿಕೆಯಂತಹ ಸಂಘಟನೆಗಳು ಜನರನ್ನು ಸಂಘಟಿಸಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಮದ್ಯನಿಷೇಧ ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಅಬಕಾರಿ ಇಲಾಖೆಯ ಆದಾಯವು ರಾಜ್ಯದ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾಗಿದೆ. ಆದರೂ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹೊಸ ಅಬಕಾರಿ ನೀತಿಯಡಿ ಹೆಚ್ಚು ಆಲ್ಕೋಹಾಲ್ ಹೊಂದಿರುವ ಮದ್ಯದ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಮದ್ಯಪಾನಕ್ಕೆ ಕಡಿವಾಣ ಹಾಕುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾವೇಶಕ್ಕೂ ಮುನ್ನ ಜಗತ್ ವೃತ್ತದಿಂದ ಬೃಹತ್ ಜನಜಾಗೃತಿ ಜಾಥಾ ನಡೆಯಿತು. ಕಲಬುರಗಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಹಲಿಗೆ ಬಾರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ರಾಜ್ಯಮಟ್ಟದ ಗಾಂಧಿ ಜಯಂತಿ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಆಳಂದ ಮಾತೋಶ್ರೀ ಅಂಬವ್ವ ರುಕ್ಮಯ್ಯ ಗುತ್ತೇದಾರ್ ಸ್ಮಾರಕ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಪೋದ್ದಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸಿ.ಎನ್. ಬಾಬಳಗಾಂವ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹೋಟೆಲ್ ಸಂಘದ ಉಪಾಧ್ಯಕ್ಷ ಸತ್ಯನಾಥ ಶೆಟ್ಟಿ, ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ವ್ಯವಸ್ಥಾಪಕ ಅಮಿತ್ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದಿನೇಶ್ ಪೂಜಾರಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಸೇರಿದಂತೆ ಹಲವರು ಮಾತನಾಡಿದರು.
ಜನಜಾಗೃತಿ ವೇದಿಕೆಯ ಅನಿಲ್ ಕುಮಾರ್, ಡಾ. ಸದಾನಂದ ಪೆರ್ಲ, ಚಂದ್ರಶೇಖರ್ ಕರ್ಜಗಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಶಾಂತಪ್ಪ ಕೋರೆ, ಮಾಲತಿ ರೇಷ್ಮಿ, ಸಿದ್ದು ಹಿರೇಮಠ, ನರಸಮ್ಮ ಆವುಂಟಿ ಹಾಗೂ ನರಸಿಂಹ ಮೆಂಡನ್ ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಗಣಪತಿ ಮಾಳಂಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಿ ಪ್ರಾರ್ಥನಾ ಗೀತೆ ಹಾಡಿದರು. ಯೋಜನಾಧಿಕಾರಿ ಕೇಶವ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ಸಂಗಪ್ಪ ವಂದಿಸಿದರು.






