Kalaburagi | ಗಾಂಜಾ ಪೆಡ್ಲರ್ ಬಂಧನ : ಶಿವಮೊಗ್ಗ ಜೈಲಿನಲ್ಲಿಡಲು ಆದೇಶ

ಕಲಬುರಗಿ: ಮಾದಕ ವಸ್ತುಗಳ ಸಂಗ್ರಹಣೆ, ಸಾಗಾಣಿಕೆ ಹಾಗೂ ಮಾರಾಟ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿದ್ದ ರೂಢಿಗತ ಗಾಂಜಾ ಪೆಡ್ಲರ್ ರಮೇಶ ಕಾಳೆ ವಿರುದ್ಧ ಕಲಬುರಗಿ ನಗರ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ಪಿಐಟಿ-ಎನ್‌ಡಿಪಿಎಸ್ (Prevention of Illicit Traffic in Narcotic Drugs and Psychotropic Substances) ಕಾಯ್ದೆ-1988ರ ಅಡಿಯಲ್ಲಿ ಬಂಧಿಸಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲು ಆದೇಶಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯ ತಿಳಿಸಿದೆ.
ಆರೋಪಿತ ರಮೇಶ ಕಾಳೆ (58), ಬಾಪೂನಗರ, ಸೇಡಂ ರಸ್ತೆ ನಿವಾಸಿಯಾಗಿದ್ದು, ಬ್ರಹ್ಮಪೂರ ಪೊಲೀಸ್ ಠಾಣೆ ವ್ಯಾಪ್ತಿಯ ‘ಎ’ ವರ್ಗದ ರೌಡಿ ಶೀಟರ್ ಆಗಿದ್ದಾನೆ. ಆತನ ವಿರುದ್ಧ ಕಲಬುರಗಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತುಗಳಾದ ಗಾಂಜಾ ಸಂಗ್ರಹಣೆ, ಸಾಗಾಣಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ 2020ರಿಂದ 2026ರವರೆಗೆ ಒಟ್ಟು 17 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿವೆ.
2022ರಲ್ಲಿ ಆರೋಪಿತಯನ್ನು ಕೊಡಗು ಜಿಲ್ಲೆಯ ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿತ್ತು. ಆದಾಗ್ಯೂ, ಗಡಿಪಾರು ಅವಧಿಯಲ್ಲಿಯೇ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಪುನಃ ಗಾಂಜಾ ಮಾರಾಟದಲ್ಲಿ ತೊಡಗಿದ್ದ ವೇಳೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಇದಲ್ಲದೆ, ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪಿ.ಎ.ಆರ್. ಸಂಖ್ಯೆ 01/2024 ಪ್ರಕರಣದಲ್ಲಿ ಒಂದು ವರ್ಷದ ಅವಧಿಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ಸದ್ವರ್ತನೆಯಿಂದ ಇರುವುದಾಗಿ ಮುಚ್ಚಳಿಕೆ ಪತ್ರ ನೀಡಿದ್ದರೂ, ನಂತರ ಬ್ರಹ್ಮಪೂರ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ 14/2024ರಲ್ಲಿ ಭಾಗಿಯಾಗುವ ಮೂಲಕ ಷರತ್ತು ಉಲ್ಲಂಘಿಸಿದ್ದರಿಂದ 25 ಸಾವಿರ ರೂ. ದಂಡ ವಿಧಿಸಲಾಗಿತ್ತು.
ಆರೋಪಿತನು ನಿರಂತರವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ, ಸಂಗ್ರಹಣೆ ಮತ್ತು ಸಾಗಾಣಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯ, ಯುವಜನತೆಯ ಭವಿಷ್ಯ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟು ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬ್ರಹ್ಮಪೂರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹಾಂತೇಶ ಪಾಟೀಲ್ ಸಲ್ಲಿಸಿದ ವರದಿ ಹಾಗೂ ಉಪ ಪೊಲೀಸ್ ಆಯುಕ್ತೆ (ಕಾನೂನು ಮತ್ತು ಸುವ್ಯವಸ್ಥೆ) ಶಾಲೂ ಐಪಿಎಸ್ ಮತ್ತು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಐಪಿಎಸ್ ಅವರ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಎಎನ್‌ಟಿಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯ ಕಲಂ 3(1)ರ ಅಡಿಯಲ್ಲಿ ಆರೋಪಿತಯನ್ನು ಬಂಧಿಸಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ನಿರ್ಬಂಧಿತ ಬಂಧನದಲ್ಲಿಡಲು ಆದೇಶ ಹೊರಡಿಸಿದ್ದಾರೆ.






