Kalaburagi | ದಲಿತರ ಮೇಲಿನ ದೌರ್ಜನ್ಯ ತಡೆಗೆ ಸರಕಾರ, ಜಿಲ್ಲಾಡಳಿತ ವಿಫಲ : ಎ.ಬಿ.ಹೊಸಮನಿ ಆರೋಪ

ಕಲಬುರಗಿ: ರಾಜ್ಯಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಹಾಗೂ ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆರ್ಪಿಐ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ದಕ್ಷಿಣ ಭಾರತ ಪ್ರಧಾನ ಕಾರ್ಯದರ್ಶಿ ಎ.ಬಿ.ಹೊಸಮನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಾದ್ಯಂತ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವುದು, ಜಿಲ್ಲಾ ಮಟ್ಟದ ಸಮಿತಿಯನ್ನು ಶೀಘ್ರವಾಗಿ ರಚಿಸುವುದು ಹಾಗೂ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ಬಾಕಿ ಉಳಿದಿರುವ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 112, 2025-26ನೇ ಸಾಲಿನಲ್ಲಿ 102 ಹಾಗೂ 2026-27ನೇ ಸಾಲಿನಲ್ಲಿ 27 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 1992ರಿಂದ 2026ರವರೆಗೆ ಸಾಬೀತಾಗಿರುವ 41 ಸುಳ್ಳು ಜಾತಿ ಪ್ರಮಾಣಪತ್ರ ಪ್ರಕರಣಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಾತಿ ಪರಿಶೀಲನಾ ಸಮಿತಿಯಲ್ಲಿ (ಡಿಸಿವಿಸಿ) ಇಂದಿಗೂ ಬಾಕಿ ಉಳಿದಿವೆ. ಈ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ರಚನೆಯನ್ನೂ ನಿರ್ಲಕ್ಷಿಸಲಾಗಿದೆ ಎಂದು ದೂರಿದರು.
ಕಲಬುರಗಿ ತಾಲೂಕಿನ ಸಿಂದಗಿ (ಬಿ) ಗ್ರಾಮದ ಪರಿಶಿಷ್ಟ ಪಂಗಡದ (ಪಾರ್ದಿ) ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಜಿಲ್ಲಾಡಳಿತ ಪಾಲಿಸಿಲ್ಲ. ಪ್ರತಿ ತಿಂಗಳ ಕೊನೆಯ ಭಾನುವಾರ ಪೊಲೀಸ್ ಅಧಿಕಾರಿಗಳು ನಡೆಸಬೇಕಾದ ‘ದಲಿತ ದಿನ’ ಸಭೆಯನ್ನೂ ನಡೆಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆರೋಪಿಸಿದರು.
ರಾಯಚೂರು, ಕಲಬುರಗಿ, ಮೈಸೂರು, ಯಾದಗಿರಿ, ಹಾಸನ, ತುಮಕೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ನಡೆದ ಭೂಮಾನಂದ, ರೇಣಮ್ಮ, ಅಶ್ವಿನಿ ಚಲವಾದಿ, ರಮೇಶ್ ನಕ್ಕುಂದಿ, ಮಾದೇವಮ್ಮ, ಬಾಲಕ ಸಿಂಹಾದ್ರಿ, ರಾಜಕುಮಾರ ಶಿಂಧೆ ಸೇರಿದಂತೆ ಹಲವು ದಲಿತರ ಕೊಲೆ ಹಾಗೂ ದೌರ್ಜನ್ಯ ಪ್ರಕರಣಗಳ ಸಂತ್ರಸ್ತ ಕುಟುಂಬಗಳಿಗೆ ಗೃಹ ಸಚಿವರು ಸಾಂತ್ವನ ಹೇಳಿ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಭಾವಿಕಟ್ಟಿ, ಮಲ್ಲೇಶ್ ಹೊನಗುಂಟಿಕರ್, ದಿನೇಶ್ ಔರಾದಕರ್, ಬಾಲಾಜಿ ಕಾಂಬಳೆ, ಮಿಲಿಂದ್ ಕಣ್ಮುಸ್, ಶರಣಬಸಪ್ಪ ವೈಜಾಪುರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






