ಕಲಬುರಗಿ | ಆರೆಸ್ಸೆಸ್ ಗಣವೇಷದಲ್ಲಿ ಕಾಣಿಸಿಕೊಂಡ ಸರಕಾರಿ ಕಾಲೇಜಿನ ಪ್ರಾಧ್ಯಾಪಕ : ಫೋಟೋ ವೈರಲ್

ಕಲಬುರಗಿ: ರಾಯಚೂರಿನಲ್ಲಿ ಗಣವೇಷಧಾರಿಯಾಗಿ ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ವಿರುದ್ಧ ಕ್ರಮ ತೆಗೆದುಕೊಂಡ ಬಳಿಕ ಕಲಬುರಗಿ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜೊಂದರ ಪ್ರಾಧ್ಯಾಪಕ ಕೂಡ ಆರೆಸ್ಸೆಸ್ ಗಣವೇಷಧಾರಿಯಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ.
ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಸುಭಾಷ್ ನಾಟಿಕಾರ ಗಣವೇಶಧಾರಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
'ಇವರು ಎಷ್ಟು ಮಕ್ಕಳ ತಲೆಯಲ್ಲಿ ವಿಷ ತುಂಬಿರಬಹುದು? ಗಣವೇಶದಲ್ಲಿ ಕಾಣಿಸಿಕೊಂಡ ಕೆಲವರಲ್ಲಿ ಇವರು ಒಬ್ಬರು. ಅಂತರಂಗದ ಕೋಮುವಾದಿಗಳು ಎಷ್ಟಿರುವರೊ..' ಎಂದು ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೂಡಲೇ ಇಂಥವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದಕ್ಕೂ ಮುನ್ನ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಜಿ. ಯಳಸಂಗಿ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅ.6 ರಂದು ಫೋಟೋ ಪೋಸ್ಟ್ ಮಾಡಿದ್ದು, 'ನಮ್ಮೂರು ಯಳಸಂಗಿ ಪದವಿಪೂರ್ವ ಕಾಲೇಜ್ ನ ಪ್ರಿನ್ಸಿಪಾಲ್ ಸುಭಾಷ್ ನಾಟಿಕಾರನ ದೇಶ ಪ್ರೇಮ್ ನೋಡಿ ಎಷ್ಟೊಂದು ತುಂಬಿ ತುಳುಕುತ್ತಿದೆ..' ಎಂದು ಬರೆದುಕೊಂಡಿದ್ದಾರೆ.







