Kalaburagi | ಕೇಂದ್ರದ ಮಾದರಿಯ ವೇತನ ಜಾರಿಗೆ ಸರ್ಕಾರಿ ನೌಕರರ ಸಂಘ ಆಗ್ರಹ

ಕಲಬುರಗಿ: ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಸರ್ಕಾರಿ ನೌಕರರಿಗೆ ನೀಡುತ್ತಿರುವ ಮಾದರಿಯ ವೇತನ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಒತ್ತಾಯಿಸಿದರು.
ನಗರದ ಸೇಡಂ ರಸ್ತೆಯ ಎಂಆರ್‌ಎಂಸಿ ಸ್ಯಾಕ್ ಸಭಾಂಗಣದಲ್ಲಿ ಶನಿವಾರ ನಡೆದ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ 22 ರಾಜ್ಯಗಳಲ್ಲಿ ಕೇಂದ್ರ ಮಾದರಿಯ ವೇತನ ವ್ಯವಸ್ಥೆ ಜಾರಿಯಲ್ಲಿದೆ. ಬಿಹಾರದಲ್ಲಿಯೂ ಈ ವ್ಯವಸ್ಥೆ ಅನುಷ್ಠಾನಗೊಂಡಿದೆ. ಆದರೆ, ಕರ್ನಾಟಕದಲ್ಲಿ ಇನ್ನೂ ಕೇಂದ್ರ ಮಾದರಿಯ ವೇತನ ಜಾರಿಯಾಗದಿರುವುದು ಬೇಸರದ ಸಂಗತಿ ಎಂದರು.
ರಾಜ್ಯದಲ್ಲಿ 2.93 ಲಕ್ಷ ಎನ್‌ಪಿಎಸ್ ನೌಕರರಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಈ ಭರವಸೆ ಈಡೇರುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಕೃತಕ ಬುದ್ಧಿಮತ್ತೆ (ಎಐ) ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗಳು ನಡೆಯುತ್ತಿವೆ. ಇದರಿಂದ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿಯೂ ಎದುರಾಗುತ್ತಿದೆ. ಪ್ರತಿವರ್ಷ ದೇಶದಲ್ಲಿ ಸುಮಾರು 1.20 ಕೋಟಿ ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು ಹೊರಬರುತ್ತಿದ್ದು, ನಿರುದ್ಯೋಗದ ಪ್ರಮಾಣ ಹೆಚ್ಚುತ್ತಿದೆ. ಜನಸಂಖ್ಯೆ ನಿಯಂತ್ರಣದ ಬಗ್ಗೆಯೂ ಗಂಭೀರ ಚಿಂತನೆ ಅಗತ್ಯ ಎಂದು ಷಡಕ್ಷರಿ ಹೇಳಿದರು.
371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹ :
ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಮಾತನಾಡಿ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.19ರಷ್ಟು ಜನಸಂಖ್ಯೆ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ನೌಕರರ ಪ್ರಮಾಣ ಕೇವಲ ಶೇ.4ರಷ್ಟಿದೆ. 371(ಜೆ) ಮೀಸಲಾತಿ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಬಡ್ತಿಯಲ್ಲಿ ಅನ್ಯಾಯವಾಗುತ್ತಿದೆ. 1997ರಲ್ಲಿ ಶಿಕ್ಷಕರಾಗಿ ನೇಮಕಗೊಂಡವರಿಗೂ ಕೆಲವೆಡೆ ಇನ್ನೂ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ದೊರೆತಿಲ್ಲ. ಈ ತಾರತಮ್ಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ನೌಕರರ ಜವಾಬ್ದಾರಿ ಹಾಗೂ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು, ಹೊಸ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವುದರ ಜೊತೆಗೆ ನೌಕರರು ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.
ಸರ್ಕಾರಿ ನೌಕರಿ ಕೊನೆಯ ಆಯ್ಕೆಯಾಗಲಿ :
ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ ಸಂಗಾ ಮಾತನಾಡಿ, ಸರ್ಕಾರಿ ನೌಕರಿಯು ಹಲವು ನಿಯಮ ಹಾಗೂ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಯುವಕರು ಸರ್ಕಾರಿ ನೌಕರಿಯನ್ನು ಮೊದಲ ಆಯ್ಕೆಯಾಗಿ ಪರಿಗಣಿಸದೆ, ವಿವಿಧ ಕ್ಷೇತ್ರಗಳಲ್ಲಿರುವ ಅವಕಾಶಗಳತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಗ್ರೂಪ್ ‘ಬಿ’ಗಿಂತ ಕೆಳಗಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಹಲವು ರೀತಿಯ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಸರ್ಕಾರಿ ನೌಕರಿಯ ಕನಸು ಕಾಣುವ ಯುವಕರು ಉನ್ನತ ಹುದ್ದೆಗಳತ್ತ ಗಮನ ಹರಿಸಬೇಕು ಎಂದರು.
ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಮಾತನಾಡಿದರು. ಚಿತ್ತಾಪುರ ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ :
2025–26ನೇ ಸಾಲಿನಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಬಸವರಾಜು, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ, ಹಿರಿಯ ಉಪಾಧ್ಯಕ್ಷ ಸೋಮಶೇಖರಯ್ಯ, ಬೀದರ್ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ಯಾದಗಿರಿ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಜಿ. ಹುಡೇದ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಂದಿನಿ ಸನಬಾಳ್, ಜಿಲ್ಲಾ ಕಾರ್ಯದರ್ಶಿ ಚಂದ್ರಕಾಂತ ಏರಿ, ಜಿಲ್ಲಾ ಖಜಾಂಚಿ ಶ್ರೀಮಂತ ಪಟ್ಟದಾರ, ಜಿಲ್ಲಾ ಪರಿಷತ್ ಸದಸ್ಯ ಧರ್ಮರಾಜ ಜವಳಿ, ರಾಜ್ಯ ಜಂಟಿ ಕಾರ್ಯದರ್ಶಿ ಅಣವೀರ, ಜಿಲ್ಲಾ ಜಂಟಿ ಕಾರ್ಯದರ್ಶಿ ರಾಜರತ್ನ ಡಿ.ಕೆ., ಸಂಘಟನಾ ಕಾರ್ಯದರ್ಶಿ ವೆಸ್ಲಿ ವೇದರಾಜ್, ಪ್ರಕಾಶ ಉದನೂರ ಸೇರಿದಂತೆ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ವಿವಿಧ ಪದಾಧಿಕಾರಿಗಳು, ನಿರ್ದೇಶಕರು, ತಾಲೂಕು ಶಾಖೆಗಳ ಪದಾಧಿಕಾರಿಗಳು ಹಾಗೂ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.






