ಕಲಬುರಗಿ | ಸರಕಾರಿ ನೌಕರರ ದಿನಾಚರಣೆ, ಸರ್ವೋತ್ತಮ ಪ್ರಶಸ್ತಿ ಪ್ರದಾನ

ಕಲಬುರಗಿ: ಸರ್ಕಾರದ ಜನಪರ ಯೋಜನೆಯನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಮತ್ತು ಸರ್ಕಾರ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರನೇ ಸ್ಥಳೀಯವಾಗಿ ಸರ್ಕಾರದ ಸೇವಕನಾಗಿ ಕೆಲಸ ನಿರ್ವಹಿಸುತ್ತಾನೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶುಕ್ರವಾರ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 2025ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಅಂಗವಾಗಿ 2023, 2024, 2025ನೇ ಸಾಲಿನ ರಾಜ್ಯ ಸರ್ಕಾರಿ ಅಧಿಕಾರಿ-ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮತ್ತು 371(ಜೆ) ನಿಯಮಾವಳಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ನೀತಿ, ನಿಯಮಗಳನ್ನು ರೂಪಿಸುತ್ತದೆ. ಆದರೆ, ಅದರ ಪರಿಣಾಮಕಾರಿ ಅನುಷ್ಠಾನದ ಜವಾಬ್ದಾರಿ ನೌಕರದಾಗಿರುತ್ತದೆ ಎಂದರು.
ಜನಪ್ರತಿನಿಧಿಗಳು ಮತ್ತು ನೌಕರರು ಇಬ್ಬರು ಸಾರ್ವಜನಿಕರ ಸೇವಕರೆ ಆಗಿದ್ದಾರೆ. ಸಾರ್ವಜನಿಕರ ಸೇವೆ ಮಾಡಲು ಇಚ್ಚೆ ಪಟ್ಟು ನಾವೇ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಹೀಗಾಗಿ ಆಯ್ಕೆ ಮಾಡಿಕೊಂಡ ವೃತ್ತಿಯಲ್ಲಿ ಕರ್ತವ್ಯ ನಿಷ್ಠೆ ಮರೆಯಬೇಕು. ಜನರ ಪ್ರಗತಿ ಮತ್ತು ಏಳಿಗೆ ನಮ್ಮ ಗುರಿಯಾಗಿರಬೇಕು. ಸಾರ್ವಜನಿಕರ ಕೆಲಸ ಮಾಡಿಕೊಡುವ ಸಂದರ್ಭದಲ್ಲಿ ಮಾನವೀಯತೆಯನ್ನು ಸಹ ನಾವು ನೋಡಬೇಕಾಗುತ್ತದೆ. ಕಾಳಜಿ, ಉದಾರ ಮನಸ್ಸು, ತಾಳ್ಮೆ ಹೊಂದುವುದು ಅವಶ್ಯಕ. ಬಸವಣ್ಣನವರ ದಾಸೋಹ ಮತ್ತು ಕಾಯಕ ತತ್ವವನ್ನು ಅಕ್ಷರಸ ಸರ್ಕಾರಿ ನೌಕರರು ಪಾಲಿಸಬೇಕು ಎಂದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಒಟ್ಟಾರೆಯಾಗಿ ಜನಪ್ರತಿನಿಧಿ ಮತ್ತು ಸರ್ಕಾರಿ ನೌಕರರು ಜನರಿಗೆ ಉತ್ತರದಾಯಿತ್ವರಾಗಿರಬೇಕಾಗಿರುತ್ತದೆ ಎಂಬುದನ್ನು ಮರೆಯಬಾರದು ಎಂದರು.
ಇತ್ತೀಚೆಗೆ ಅತಿವೃಷ್ಠಿ ಮತ್ತು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ದಸರಾ, ದೀಪಾವಳಿ ಹಬ್ಬ ಎನ್ನದೆ ನೀವೆಲ್ಲ ಕೆಲಸ ಮಾಡಿದ್ದೀರಿ ಇದಕ್ಕಾಗಿ ನಿಮಗಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಿಂದೆ ಕೋವಿಡ್‌ನಲ್ಲಿಯೂ ನಿಮ್ಮ ಸೇವೆ ಶ್ಲಾಘನೀಯವಾಗಿದೆ. ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವ ರೀತಿಯಲ್ಲಿ ದೇವರ ಮೇಲೆ ಭಾರ ಹಾಕದೆ ಕೆಲಸ ನೀವೆಲ್ಲ ಮಾಡಿದ ಪರಿಣಾಮ ಅತಿವೃಷ್ಠಿಯಿಂದ ಜಿಲ್ಲೆಯ 3.50 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದರಿಂದ ಅನ್ನದಾತನಿಗೆ ಸರ್ಕಾರದಿಂದ ಪರಿಹಾರ ನೀಡಲು ಸಾಧ್ಯವಾಗಿದೆ. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ನಿಖರ ದತ್ತಾಂಶದಿಂದ ಬಡ, ಮಧ್ಯದವರಿಗೆ ಕಲ್ಯಾಣ ಯೋಜನೆ ರೂಪಿಸಲು ಸಾಧ್ಯವಾಗಿದೆ. ರಜಾವಿಲ್ಲದ ನಡುವೆ ಮಾಡಿರುವ ನಿಮ್ಮ ಈ ಕಾರ್ಯ ಮುಂದಿನ ಪೀಳಿಗೆಗೆ ಜನಪರ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ನೆರವಾಗಲಿದೆ ಎಂದರು.
ಪಂಚ ಸೂತ್ರ ಅಳವಡಿಸಿಕೊಳ್ಳಿ :
ಸಾರ್ವಜನಿಕ ಸೇವೆಯನ್ನು ಪರಿಣಾಮಕಾರಿಯಾಗಿ ಮಾಡಲು ಪ್ರತಿಯೊಬ್ಬ ಸರ್ಕಾರಿ ನೌಕರರು ಸ್ಪಂದನೆ, ಸಮನ್ವಯತೆ, ಸಮಯ ಪ್ರಜ್ಞೆ, ಪರಿಣಾಮಕಾರಿ ಅನುಷ್ಠಾನ ಹಾಗೂ ಹೊಣೆಗಾರಿಕೆ ಎಂಬ ಪಂಚ ಸೂತ್ರಗಳನ್ನು ಅಳವಡಿಸಿಕೊಂಡಾಗ ಮಾತ್ರ ಜನರ ನಿರೀಕ್ಷೆಯಂತೆ ಕೆಲಸ ಮಾಡಲು ಸಾಧ್ಯವಾಗಲಿದೆ. ಸಾರ್ವಜನಿಕರಿಗೆ ಅನಗತ್ಯ ಅಲೆದಾಡಿಸುವ ಬದಲು ಆಗುವುದಾದರೆ ಕೆಲಸ ಆಗುತ್ತೆ, ಇಲ್ಲದಿದ್ದರೆ ನಿಯಮಾವಳಿಯಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿಬಿಡಿ. ನೋಡೋಣ, ಮಾಡೋಣ ಸಂಸ್ಕೃತಿ ಬೇಡ. ನಿಷ್ಟುರವಾದರೂ ಪರವಾಗಿಲ್ಲ ಸತ್ಯವನ್ನು ಹೇಳ್ಬಿಡಿ ಎಂದು ನೌಕರರಿಗೆ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.
ಸಂಘದ ಕಚೇರಿ ತೆರಿಗೆ ವಿನಾಯ್ತಿಗೆ ಪ್ರಯತ್ನ :
ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಘಟಕವು ಹೊಂದಿರುವ ನಿವೇಶನಕ್ಕೆ ತೆರಿಗೆ ವಿನಾಯಿತಿ ನೀಡಬೇಕೆಂಬ ಸಂಘದ ಬೇಡಿಕೆ ಪ್ರಸ್ತಾಪದ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಖ್ ಖರ್ಗೆ, ಸಚಿವ ಸಂಪುಟದ ಮುಂದೆ ಬಂದಲ್ಲಿ ಅನುಮೋದನೆ ದೊರಕಿಸಲು ಪ್ರಯತ್ನಿಸುವೆ. ಇದಲ್ಲದೆ ಸಂಘದ ಇನ್ನಿತರ ಬೇಡಿಕೆಗಳಾದ 371ಜೆ ಲೋಪ ಸರಿಪಡಿಸುವುದು, ವಸತಿ ಗೃಹಗಳ ನಿರ್ಮಾಣ, ಬಿ.ಇ.ಓ ಕಚೇರಿ, ತಾಲೂಕಾ ಆಡಳಿತ ಸೌಧ ನಿರ್ಮಾಣ ಎಲ್ಲವು ಸಹ ಹಂತ-ಹಂತವಾಗಿ ಬಗೆಹರಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಯ ನೀಡಿದರು.
ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ :
ಇದೇ ಸಂದರ್ಭದಲ್ಲಿ 2023, 2024 ಹಾಗೂ 2025ನೇ ಸಾಲಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದ ಸುಮಾರು 30 ಜನ ನೌಕರರಿಗೆ ಸತ್ಕರಿಸಲಾಯಿತು. 2023ನೇ ಸಾಲಿಗೆ ಶಶಿಧರ ವಿ.ಬಾಳೆ, ಗಾಯತ್ರಿ, ವಿದ್ಯಾಧರ, ಲಲಿತಾ, ಜ್ಯೋತಿ, ಚಾಮರಾಜ ದೊಡ್ಡಮನಿ, ಡಾ.ಶಿವಶರಣಪ್ಪ ಉಕ್ಕಲಿ, ನಾಗುಬಾಯಿ ಸೂರ್ಯವಂಶಿ, ಶಿವಪುತ್ರ ಹಾಗೂ ಮುಹಮ್ಮದ್ ರಫೀಕ್. 2024ನೇ ಸಾಲಿಗೆ ಡಾ.ರವಿಕಾಂತಿ ಎಸ್ ಕ್ಯಾತನಾಳ್, ಡಾ.ವೈಜನಾಥ ಮಮ್ಮಣಿ, ಡಾ.ಶಾಂತಾಬಾಯಿ ಬಿರಾದಾರ, ಸಂಗೀತಾ, ಸುಧಾ ಮದನಕರ್, ರಾಜಶೇಖರ ಉದನೂರ, ವಿಜಯಕುಮಾರ ಸೋಮನೂರ, ಬಿ.ಪಿ.ಕಾಳಿಂಗ, ಸುನೀಲಕುಮಾರ ಹಾಗೂ ಗೀತಾಬಾಯಿ ಬಾಬುರಾವ. 2025ನೇ ಸಾಲಿಗೆ ಡಾ.ಶಂಕರ ಎಸ್.ಕಣ್ಣಿ, ಮಲ್ಲಿಕಾರ್ಜುನ, ರಾಜಕುಮಾರ ರಾಠೋಡ, ಶಿವಶಂಕ್ರಯ್ಯ, ಲಕ್ಷ್ಮೀ, ರವಿಶಂಕರ, ಡಾ.ವಿಜಯಕುಮಾರ, ದಮಯಂತಿ, ಗಂಗಾಬಾಯಿ ಹಾಗೂ ಬಸವ್ವ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಗಣ್ಯರು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ ಅವರು 371( ಜೆ) ನಿಯಮಾವಳಿಗಳ ಕುರಿತು ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.
ಕಲಬುರಗಿ ದಕ್ಷಿಣ ಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಅರುಣಕುಮಾರ ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ, ತಹಶೀಲ್ದಾರರ್ ಆನಂದಶೀಲ, ನೌಕರರ ಸಂಘದ ಖಜಾಂಚಿ ಶ್ರೀಮಂತ ಪಟ್ಟೇದಾರ, ರಾಜ್ಯ ಪರಷತ್ ಸದಸ್ಯರಾದ ಧರ್ಮರಾಯ ಜವಳಿ, ಕಾರ್ಯಾಧ್ಯಕ್ಷ ಚಂದ್ರಕಾಂತ ಏರಿ, ಹಿರಿಯ ಉಪಾಧ್ಯಕ್ಷರಾದ ಎಂ.ಬಿ.ಪಾಟೀಲ್, ಸುರೇಶ ವಗ್ಗೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಶಂಕರಯ್ಯ ಮಠಪತಿ, ಸಿದ್ದಲಿಂಗಯ್ಯ ಮಠಪತಿ, ದಾನಪ್ಪಗೌಡ ಹಳಿಮನಿ, ವಿಭಾಗೀಯ ಉಪಾಧ್ಯಕ್ಷರಾದ ನಿಜಲಿಂಗಪ್ಪ ಕೊರಳ್ಳಿ, ನಿಜಲಿಂಗಪ್ಪ ಮಾನ್ವಿ, ರಾಜ್ಯ ಪರಿಷತ್ ಸದಸ್ಯ ಸಂತೋಷ ಸಲಗರ ಸೇರಿದಂತೆ ನೌಕರರ ಸಂಘದ ತಾಲೂಕಾ ಅಧ್ಯಕ್ಷರು, ಜಿಲ್ಲಾ ಮತ್ತು ತಾಲೂಕು ಘಟಕದ ಅನೇಕ ಪದಾಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ನೌಕರರು ಮತ್ತು ಅವರ ಕುಟುಂಬ ವರ್ಗದವರು ಭಾಗವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ ಹೂಗಾರ ನಿರೂಪಿಸಿದರು.







