ಕಲಬುರಗಿ | ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಸರಕಾರಿ ನೌಕರರ ಸಂಘ ಬೆಂಬಲ

ಕಲಬುರಗಿ : ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಗರದ ತಹಶೀಲ್ದಾರ್ ಕಚೇರಿ ಎದುರು ಎರಡು ದಿನಗಳಿಂದ ಗ್ರಾಮ ಆಡಳಿತ ಅಧಿಕಾರಿಗಳಿಂದ ನಡೆಯುತ್ತಿರುವ ಮುಷ್ಕರ ಸ್ಥಳಕ್ಕೆ ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳುಂಡಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಆದೇಶದ ಮೇರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದ್ದು, ಧರಣಿ ನಿರತ ಅಧಿಕಾರಿಗಳು ಕೈಗೆ ಕಪ್ಪು ಬಟ್ಟೆ ಧರಿಸಿ ಸರಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ತಾಲೂಕಾಧ್ಯಕ್ಷ ಕಿರಣಕುಮಾರ ಮಾತನಾಡಿ, ಇ-ಪೌತಿ ಖಾತಾ ಆಂದೋಲನ ಕೈ ಬಿಡಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ, ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್ ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಕಲ್ಪಿಸಬೇಕು. ಪ್ರಯಾಣ ಭತ್ಯೆ ಹೆಚ್ಚಿಸಬೇಕು. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಈ ಹಿಂದೆ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಈವರೆಗೆ ಯಾವುದೇ ಬೇಡಿಕೆ ಈಡೇರಿಸಿಲ್ಲ. ಬದಲಿಗೆ ಕೆಲಸದ ಒತ್ತಡ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು. ಬೇಡಿಕೆ ಈಡೇರಿಸುವವರೆಗೆ ಮುಷ್ಕರ ಮುಂದುವರೆಸಲಾಗುವುದೆಂದು ಎಚ್ಚರಿಕೆ ನೀಡಲಾಯಿತು.
ಶ್ರೀಮಂತ ಪಟೇದ್ದಾರ, ಧರ್ಮರಾಜ ಜವಳಿ, ಚಂದ್ರಕಾಂತ ಏರಿ, ಬಾಬು ಮೌರ್ಯ, ಎಂ.ಬಿ.ಪಾಟೀಲ, ಕೃಷ್ಣಾಚಾರಿ, ಸಂತೋಷ ಸಲಗರ, ರಾಜು ಗೋಪಣೆ, ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿ ನೌಕರರ ಸಮಘದ ಅಧ್ಯಕ್ಷ ಮೋತಿಲಾಲ ಚವ್ಹಾಣ, ಗ್ರಾಮ ಆಡಳಿತಾಧಿ ಕಾರಿಗಳಾದ ಗುರುಮೂರ್ತಯ್ಯ ಚತುರಾಚಾರಿಮಠ, ರೇವಣಸಿದ್ದಪ್ಪ ಚಂದನಕೇರಿ, ಕುಮಾರ ಸೇರಿದಂತೆ ಇತರರು ಇದ್ದರು.







