ಕಲಬುರಗಿ | ಕಬ್ಬು ಬೆಳೆಗಾರರ ಜ್ವಲಂತ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ: ಬಿ.ಆರ್.ಪಾಟೀಲ್

ಕಲಬುರಗಿ : ಬೆಲೆ ಅಸ್ಥಿರತೆ, ರೈತರ ಖಾತೆಗೆ ತಕ್ಷಣದ ಹಣ ಪಾವತಿ ವಿಳಂಬ, ಬೆಳೆ ನಾಶ ಹಾಗೂ ಕಬ್ಬು ಬೆಳೆಗಾರರಿಗೆ ಕಾರ್ಖಾನೆಯಿಂದ ವಿಳಂಬವಾಗಿ ಬೆಲೆ ನಿಗದಿಯಾಗುತ್ತಿರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ, ಸರಕಾರ ತಕ್ಷಣವೇ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂದು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್.ಪಾಟೀಲ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬಿಗೆ ಅವೈಜ್ಞಾನಿಕ ಎಫ್‌ಆರ್‌ಪಿ ಬೆಲೆ ನಿಗದಿಯನ್ನು ಹಿಂದಿನ ಸಾಲಿನ ಇಳುವರಿ ಆಧಾರದಲ್ಲಿ ಮಾಡುವುದು ಸರಿಯಲ್ಲ, ಪ್ರಸ್ತುತ ಸಾಲಿನ ಇಳುವರಿ ಆಧಾರದಲ್ಲಿ ಬೆಲೆ ನಿಗದಿಯಾಗಬೇಕು, ತೂಕದ ಯಂತ್ರದಲ್ಲಾಗುತ್ತಿರುವ ಮೋಸ ತಪ್ಪಿಸಬೇಕು, ಕಬ್ಬಿನಿಂದ ಬರುವ ಉಪ ಉತ್ಪನ್ನಗಳಿಂದ ಬರುವ ಲಾಭದಲ್ಲಿಯೂ ರೈತರಿಗೂ ಪಾಲು ಸಿಗಬೇಕು. ಸಿ.ರಂಗನಾಥನ್ ಸಮಿತಿ ವರದಿ ಪ್ರಕಾರ ಕಬ್ಬಿನಿಂದ ಬರುವ ಉತ್ಪನ್ನಗಳಲ್ಲಿ ರೈತರಿಗೆ ಶೇ.70 ಹಾಗೂ ಉಳಿದ ಶೇ.30ರಷ್ಟು ಕಾರ್ಖಾನೆಗಳಿಗೆ ಹಂಚಬೇಕೆಂದು ಒತ್ತಾಯಿಸಿದರು.
ಈಗಾಗಲೇ ಇರುವ ಬೆಳೆವಿಮೆಯನ್ನು ಕಬ್ಬು ಬೆಳೆಗೂ ವಿಸ್ತರಿಸಬೇಕು, ರೈತರಿಂದ ಕಾರ್ಖಾನೆಗೆ ಕಬ್ಬು ಸರಬರಾಜಾದ 14 ದಿನಗಳಲ್ಲಿ ಹಣ ಪಾವತಿಯಾಗಬೇಕು, ಅವಧಿಯೊಳಗೆ ಹಣ ಸಂದಾಯವಾಗದಿದ್ದರೆ ಕಾನೂನು ಪ್ರಕಾರ ಶೇ.15ರಷ್ಟು ಬಡ್ಡಿ ಸಮೇತ ಹಾಕಬೇಕೆಂದರು.
ಗುಜರಾತ್ ರಾಜ್ಯದಲ್ಲಿ ಪ್ರತಿಟನ್ ಕಬ್ಬಿಗೆ ಕಟಾವು ಮತ್ತು ಸಾಗಾಟ ವೆಚ್ಚ ತೆಗೆದು 4 ಸಾವಿರ ರೂ. ನಿಗದಿ ಮಾಡಿದೆ. ಈ ಕುರಿತು ಅಧ್ಯಯನ ಮಾಡಲು ಸಮಿತಿಯೊಂದು ರಚಿಸಿ ಕಳುಹಿಸಿ ವರದಿ ತಂದ ನಂತರ ರಾಜ್ಯದಲ್ಲಿಯೂ ಅದನ್ನು ಜಾರಿಮಾಡಬೇಕೆಂದು ಒತ್ತಾಯಿಸಿದರು.
ಕಬ್ಬು ಕಟಾವಿಗು ಮುಂಚೆ ರಾಜ್ಯ ಸರಕಾರ ಕಬ್ಬಿಗೆ ಬೆಲೆ ನಿಗದಿ ಮಾಡಬೇಕು, ಆದರೆ ಸರಕಾರ ಬೆಲೆ ನಿಗದಿ ಮಾಡದೆ ಕಾರ್ಖಾನೆ ಪ್ರಾರಂಭಿಸುತ್ತಿರುವುದರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಗದೀಶ್ ಪಾಟೀಲ್, ಶಾಂತವೀರಪ್ಪ ಕಲಬುರಗಿ, ಧರ್ಮರಾಜ ಸಾಹು, ಶಾಂತವೀರಪ್ಪ ದಸ್ಥಾಪುರ, ನಾಗೇಂದ್ರ ರಾವ್ ದೇಶಮುಖ್, ದೌಲತರಾಯ ಬಿರಾದಾರ ಇದ್ದರು.







