ಕಲಬುರಗಿ | ʼʼಒಳಮೀಸಲಾತಿ ವರ್ಗೀಕರಣಗೊಳಿಸಿದ ಸರ್ಕಾರ ಕ್ರಮ ಸ್ವಾಗತಾರ್ಹʼʼ

ಕಲಬುರಗಿ: 101 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ಎಡಗೈ ಸಮಾಜಕ್ಕೆ ಶೇ.6 ಬಲಗೈ ಸಮಾಜಕ್ಕೆ ಶೇ.6 ಮತ್ತು ಸ್ಪಶ್ಯ ಸಮುದಾಯಕ್ಕೆ ಶೇ.5 ವರ್ಗಿಕರಣಗೊಳಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಸಚಿವ ಸಂಪುಟದ ಸಚಿವರು ಹಿಂದುಳಿದಿದ್ದ ಪರಿಶಿಷ್ಟ ಸಮುದಾಯಕ್ಕೆ ಬಲಗೈ ಮತ್ತು ಎಡಗೈ ಶೇ.6 ಮತ್ತು ಸ್ಪರ್ಶ ಸಮುದಾಯಕ್ಕೆ ಶೇ.5 ರಷ್ಟು ಮೀಸಲಾತಿ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಮುನ್ನುಡಿ ಹಾಕಿಕೊಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರು ಮಹಾಂತಪ್ಪ ಸಂಗಾವಿ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮದ ವಕ್ತಾರರು ಆರ್.ಗಣಪತರಾವ್ ಅವರು ಜಂಟಿಯಾಗಿ ಹೇಳಿದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ವರದಿಯನ್ವಯ ಪರಿಶಿಷ್ಟ ಸಮುದಾಯಕ್ಕೆ ಶೇ.6 ರಷ್ಟು ಮೀಸಲಾತಿ ನೀಡುವ ಮೂಲಕ ಸಮಾಜದ ಜನರು ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಸಚಿವ ಸಂಪುಟದ ಸಚಿವರು ಮತ್ತು ಕಾಂಗ್ರೇಸ್ ಪಕ್ಷದ ಈ ಮಹತ್ತರವಾದ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಹಲವು ದಶಕಗಳಿಂದ ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಸಾಕಷ್ಟು ಪ್ರತಿಭಟನೆ ಹಾಗೂ ನ್ಯಾಯಾಲಯದಲ್ಲಿಯೂ ಕೂಡ ಈ ಬಗ್ಗೆ ಸಾಕಷ್ಟು ವಾದಮಂಡನೆ ಮಾಡಲಾಗಿತ್ತು. ಅಂತಿಮವಾಗಿ ಕೇಂದ್ರದ ಉನ್ನತ ನ್ಯಾಯಾಲಯ ರಾಜ್ಯ ಸರ್ಕಾರಗಳು ಅತಿ ಶೀಘ್ರದಲ್ಲಿ ಒಳಮೀಸಲಾತಿ ಜಾರಿಗೊಳಿಸುವಂತೆ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗ ರಚಿಸಿ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಶೇ.6ರಷ್ಟು ಮತ್ತು ಸ್ಪರ್ಶ ಸಮುದಾಯಕ್ಕೆ ಶೇ.5 ಒಳ ಮೀಸಲಾತಿಯನ್ನು ನೀಡಿದೆ. ಈ ನಿರ್ಧಾರವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗವು ಸ್ವಾಗತಿಸುತ್ತೇವೆ ಎಂದರು.
ಒಳ ಮೀಸಲಾತಿಯನ್ನು ದೇಶದಲ್ಲಿ ತೆಲಂಗಾಣ ರಾಜ್ಯದ ನಂತರ ಜಾರಿಗೊಳಿಸಿದ ಎರಡನೇ ರಾಜ್ಯ ಕರ್ನಾಟಕವಾಗಿದೆ, ಒಳಮೀಸಲಾತಿ ಜಾರಿಯಾದ ಕೂಡಲೇ ಕೆಲ ನೇಮಕಾತಿ ಪ್ರಕ್ರಿಯೆಗಳಿಗೂ ಚಾಲನೆ ನೀಡಲು ತೀರ್ಮಾನಿಸಿ, ವಯೋಮಿತಿ ಸಡಿಲಿಸಿರುವ ರಾಜ್ಯ ಸರ್ಕಾರ ತೀರ್ಮಾನ ಸ್ವಾಗತಾರ್ಹವಾಗಿದೆ ಎಂದು ಅವರು ಹೇಳಿದರು.
ಒಳ ಮೀಸಲಾತಿಯಿಂದ ಸಾಮಾಜಿಕ ಶೈಕ್ಷಣಿಕ ರಾಜಕೀಯ ಮತ್ತು ಆರ್ಥಿಕ ಬದುಕನ್ನು ಸಮರ್ಥವಾಗಿ ಕಟ್ಟಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೆ ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರದ ನಡೆ ಶ್ಲಾಘನೀಯವಾದದ್ದು ಎಂದು ಜಂಟಿಯಾಗಿ ಹೇಳಿದರು.







