ಕಲಬುರಗಿ | ವಿದ್ಯಾರ್ಥಿಗಳಲ್ಲಿ ಕೋಮು ವಿಷ ಬೀಜ ಬಿತ್ತುವ ಸರಕಾರಗಳು : ರಾಘವೇಂದ್ರ ಕುಷ್ಟಗಿ ಕಳವಳ

ಕಲಬುರಗಿ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದೂ–ಮುಸ್ಲಿಂ, ಮಂದಿರ–ಮಸೀದಿ ವಿಚಾರಗಳನ್ನು ಮುಂದಿಟ್ಟು ಸಮಾಜದ ಪ್ರಮುಖ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತುತ್ತಿವೆ ಎಂದು ರಾಘವೇಂದ್ರ ಕುಷ್ಟಗಿ ಕಳವಳ ವ್ಯಕ್ತಪಡಿಸಿದರು.
ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ “ನಮ್ಮೂರ ಶಾಲೆ ಉಳಿಸಿ” ಕಲ್ಯಾಣ ಕರ್ನಾಟಕ ವಲಯ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಯತ್ನಗಳು ಹಾಗೂ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಈ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿ ಯುವಜನರನ್ನು ಧರ್ಮದ ಹೆಸರಿನಲ್ಲಿ ದಿಕ್ಕು ತಪ್ಪಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣದ ಹಕ್ಕಿಗಾಗಿ ಯುವಕರು ಹೋರಾಟಕ್ಕೆ ಮುಂದಾಗಿರುವುದು ಆಶಾದಾಯಕವಾಗಿದೆ. ಈ ಸಮಾವೇಶದೊಳಗೆ ಎರಡನೇ ಸ್ವಾತಂತ್ರ್ಯ ಹೋರಾಟದ ಬೀಜ ಅಡಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸಾವಿರಾರು ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. 56 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಬಜೆಟ್‌ನಲ್ಲಿ ಕೇವಲ 15 ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡುವ ಭರವಸೆ ನೀಡಲಾಗಿದೆ ಎಂದು ಅವರು ಟೀಕಿಸಿದರು. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಮೂಲಕ ಬಡವರ್ಗದ ಜನರ ಶಿಕ್ಷಣ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಮುಂದೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಪರವಾಗಿ ಅಧಿಕಾರಕ್ಕೇರಿದರೂ ಈಗ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸುವ ಮೂಲಕ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣ ಹಕ್ಕಿಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಪ್ರತಿ ಗ್ರಾಮದಲ್ಲೂ ಸರ್ಕಾರಿ ಶಾಲೆಗಳು ಇರಬೇಕು. ಆದರೆ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಇದಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು. ಕೊಪ್ಪಳ ಜಿಲ್ಲೆಯ ಹಿರೇಬಗನಾಳ್ ಶಾಲೆಯನ್ನು ಮುಚ್ಚಿ ಹಿಟ್ನಾಳ್ ಶಾಲೆಗೆ ವಿಲೀನ ಮಾಡುವ ಕ್ರಮ ಸರಿಯಲ್ಲ. ಮಕ್ಕಳನ್ನು ದೂರದ ಊರಿಗೆ ಕಳುಹಿಸಲು ಸಾರಿಗೆ ವ್ಯವಸ್ಥೆ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
AIDSO ರಾಜ್ಯಾಧ್ಯಕ್ಷೆ ಅಶ್ವಿನಿ ಕೆ.ಎಸ್. ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮೀಸಲಾದ ಕೆಕೆಆರ್ ಡಿಬಿ ನಿಧಿಯನ್ನು ಬಳಸಿಕೊಂಡು ಕೆಪಿಎಸ್ ಶಾಲೆಗಳನ್ನು ಆರಂಭಿಸಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ರಾಜ್ಯ ಸರ್ಕಾರದ ದೊಡ್ಡ ದ್ರೋಹವಾಗಿದೆ ಎಂದು ಆರೋಪಿಸಿದರು.
ರಾಜ್ಯಾದ್ಯಂತ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಷಡ್ಯಂತ್ರ ನಡೆಯುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಮತ್ತಷ್ಟು ಬಲಪಡಿಸಲು ಏಪ್ರಿಲ್ 8ರಂದು ನಡೆಯುವ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಸುಧಾರಣೆ ಮಾಡುವುದಕ್ಕೆ ಬದಲು ವಿಲೀನಗೊಳಿಸುವ ಕ್ರಮ ಖಂಡನೀಯವಾಗಿದೆ. ಪ್ರತಿ ಹಳ್ಳಿಯಲ್ಲೂ ಈ ಯೋಜನೆ ವಿರುದ್ಧ ಹೋರಾಟ ನಡೆಸಬೇಕು ಎಂದರು.
ಭಾಷಣಕಾರರಾದ ಡಾ. ಚಂದ್ರ ಗಿರೀಶ್ ಮಾತನಾಡಿ, ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದರೂ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೆ ಮ್ಯಾಗ್ನೆಟ್ ಯೋಜನೆಯಿಂದ ಹಳ್ಳಿಗಳ ಸರ್ಕಾರಿ ಶಾಲೆಗಳು ಮುಚ್ಚಿ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಬಡ ಕೂಲಿಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯುವುದು ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ AIKKMS ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ, AIMSS ರಾಜ್ಯ ಅಧ್ಯಕ್ಷೆ ಎಂ.ಎನ್. ಮಂಜುಳಾ, AIDYO ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್, AIUTUC ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಜಿ. ದೇಸಾಯಿ, AIDSO ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ನಿವೃತ್ತ ಶಿಕ್ಷಕ ಅಬ್ದುಲ್ ವಾಹಿದ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
AIDSO ರಾಜ್ಯ ಖಜಾಂಚಿ ಸುಭಾಷ್ ಬಿ.ಜೆ. ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಮಾವೇಶದ ಅಧ್ಯಕ್ಷತೆಯನ್ನು AIDSO ರಾಜ್ಯ ಉಪಾಧ್ಯಕ್ಷೆ ಅಭಯಾ ದಿವಾಕರ್ ವಹಿಸಿದ್ದರು.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಹಳ್ಳಿ-ಹಳ್ಳಿಗಳಿಂದ ಬಂದ ನೂರಾರು ಪೋಷಕರು ಮತ್ತು ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಿ “ನಮ್ಮ ಶಾಲೆ – ನಮ್ಮ ಹಕ್ಕು”, “ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ” ಎಂಬ ಘೋಷಣೆಗಳನ್ನು ಕೂಗಿ ತಮ್ಮ ವಿರೋಧ ವ್ಯಕ್ತಪಡಿಸಿದರು.







