Kalaburagi | ಅಂಗಾಂಗ ದಾನದ ಕುರಿತು ಜನರಲ್ಲಿ ಇನ್ನಷ್ಟು ಜಾಗೃತಿ ಅಗತ್ಯ: ಡಾ.ಮಂಜುನಾಥ ದೋಶೆಟ್ಟಿ

ಕಲಬುರಗಿ: ಅಂಗಾಂಗ ದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಬೇಕಿದೆ. ಅಂಗಾಂಗಗಳ ಕೊರತೆಯಿಂದ ಹೃದಯ, ಯಕೃತ್ತು, ಮೂತ್ರಪಿಂಡ, ಮೇದೋಜೀರಕ ಗ್ರಂಥಿ, ಶ್ವಾಸಕೋಶ ಹಾಗೂ ಚರ್ಮ ಸೇರಿದಂತೆ ಜೀವ ಉಳಿಸುವ ಅಂಗಾಂಗಗಳ ತುರ್ತು ಅಗತ್ಯವಿರುವ ಅನೇಕ ರೋಗಿಗಳು ಜೀವ ಕಳೆದುಕೊಳ್ಳುವಂತಾಗಿದೆ ಎಂದು ಖ್ಯಾತ ಮೂತ್ರಪಿಂಡ ತಜ್ಞ ಹಾಗೂ ಅಂಗಾಂಗ ಕಸಿ ಪರಿಣಿತ ಡಾ. ಮಂಜುನಾಥ ದೋಶೆಟ್ಟಿ ವಿಷಾದಿಸಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಜೀವನ ಆಧಾರ ಫೌಂಡೇಶನ್, ಚಿರಾಯು ಆಸ್ಪತ್ರೆ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಅಂಗಾಂಗ ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಬುರಗಿಯಲ್ಲಿ ಈಗಾಗಲೇ ಹಲವು ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಪ್ರತಿವರ್ಷ ಜೀವ ಉಳಿಸುವ ಅಂಗಾಂಗ ಕಸಿಗಾಗಿ ಕಾಯುತ್ತಿರುವ ಸಾವಿರಾರು ಗಂಭೀರ ಸ್ಥಿತಿಯ ರೋಗಿಗಳಿಗೆ ಸಕಾಲದಲ್ಲಿ ಅಂಗಾಂಗಗಳು ದೊರೆಯದೆ ಸಾವನ್ನಪ್ಪುವ ಪರಿಸ್ಥಿತಿ ಇದೆ ಎಂದು ಹೇಳಿದರು.
ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಹೃದಯ, ಯಕೃತ್ತು, ಮೂತ್ರಪಿಂಡ, ಮೇದೋಜೀರಕ ಗ್ರಂಥಿ ಹಾಗೂ ಶ್ವಾಸಕೋಶ ಸೇರಿದಂತೆ ವಿವಿಧ ಅಂಗಾಂಗಗಳ ಕಸಿ ಅಗತ್ಯವಿರುವ ಹಲವು ರೋಗಿಗಳ ಜೀವ ಉಳಿಸಬಹುದು. ಈ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಡಾ. ದೋಶೆಟ್ಟಿ ತಿಳಿಸಿದರು.
ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿದ ಪೊಲೀಸರಿಗೆ ಸನ್ಮಾನ :
ವಿಜಯಪುರದಿಂದ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಮೂತ್ರಪಿಂಡವನ್ನು ಕಲಬುರಗಿಗೆ ತಂದು, ಜೀವನ್ಮರಣದ ಹೋರಾಟದಲ್ಲಿದ್ದ ಮಹಿಳಾ ರೋಗಿಗೆ ಯಶಸ್ವಿಯಾಗಿ ಕಸಿ ಮಾಡಲು ಅನುಕೂಲವಾಗುವಂತೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿದ ಪೊಲೀಸ್ ಸಿಬ್ಬಂದಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಲಬುರಗಿ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಕೀಲ್ ಅಂಗಡಿ, ಸಿಎಆರ್‌ನ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ ಮಹಾದೇವ ಪಾಟೀಲ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಡಾ. ಮಂಜುನಾಥ ದೋಶೆಟ್ಟಿ, ಶರಣಬಸವ ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಗೌರವಿಸಿದರು.
ಅಂಗಾಂಗವನ್ನು ತ್ವರಿತವಾಗಿ ಸಾಗಿಸಲು ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿದ ಪೊಲೀಸ್ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿಗಳಿಂದ ನೀಡಲಾದ ಪ್ರಶಂಸನಾ ಪತ್ರ ಹಾಗೂ ಪ್ರಮಾಣಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಮಾತನಾಡಿ, ಯುವಕರು ಅಂಗಾಂಗ ದಾನವನ್ನು ಜನಾಂದೋಲನವಾಗಿ ರೂಪಿಸಬೇಕು ಎಂದು ಕರೆ ನೀಡಿದರು.
ಯುವಕರು ತಮ್ಮೊಂದಿಗೆ ತಮ್ಮ ಪೋಷಕರನ್ನೂ ಅಂಗಾಂಗ ದಾನಕ್ಕೆ ನೋಂದಾಯಿಸಬೇಕು. ಅಂಗಾಂಗ ದಾನದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಕೈಗೊಳ್ಳಬೇಕು. ಅಂಗಾಂಗ ದಾನ ಸುರಕ್ಷಿತವಾಗಿದ್ದು, ಇಂದಿನ ಸಮಾಜದ ಅಗತ್ಯವಾಗಿದೆ ಎಂದು ಹೇಳಿದರು.
ಮರಣದ ನಂತರ ಕಣ್ಣುಗಳನ್ನೂ ದಾನ ಮಾಡಬಹುದು. ಪ್ರತಿಯೊಬ್ಬರೂ ಅಂಗಾಂಗ ದಾನಿಗಳಾಗಿ ನೋಂದಾಯಿಸಿಕೊಳ್ಳುವ ಮೂಲಕ ತಮ್ಮ ಮರಣದ ನಂತರವೂ ಮತ್ತೊಬ್ಬರ ಬದುಕಿಗೆ ಬೆಳಕಾಗಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ, ನಿರ್ದೇಶಕ ಪ್ರೊ. ವಿ.ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ. ಎಸ್.ಎಚ್. ಹೊನ್ನಳ್ಳಿ, ಸಂಶೋಧನಾ ಡೀನ್ ಡಾ. ಸುಜಾತಾ ಮಲ್ಲಾಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಪ್ಪ ಕ್ಯಾತನಾಳ, ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ. ರಾಕೇಶ್ ಕಾಂಬಳೆ, ಬಸಂತಿ ಗುತ್ತೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯದ ಡೀನ್ ಡಾ. ಶಿವಕುಮಾರ ಜವಳಿಗಿ ಸ್ವಾಗತಿಸಿದರು. ಪ್ರೊ.ನಿರುಪಮಾ ವಂದನಾರ್ಪಣೆ ಸಲ್ಲಿಸಿದರು. ಪ್ರೊ. ಶ್ರುತಿ ಹಂಚನಾಳ ಕಾರ್ಯಕ್ರಮ ನಿರೂಪಿಸಿದರು.






