ಕಲಬುರಗಿ | ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ

ಕಲಬುರಗಿ: ಬೆಂಗಳೂರು–ಮುಂಬೈ ನಡುವೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲಿಗೆ ರವಿವಾರ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿ ಹಸಿರು ನಿಶಾನೆ ತೋರಿಸಲಾಯಿತು.
ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿದ ವಂದೇ ಭಾರತ್ ರೈಲಿಗೆ ಸೋಲಾಪುರ ವಿಭಾಗದ ಡಿಆರ್ಎಂ ಸುಜಿತ್ ಮಿಶ್ರಾ ಸ್ವಾಗತಿಸಿ, ಬಳಿಕ ಕಲಬುರಗಿಯಿಂದ ಹಸಿರು ಧ್ವಜ ತೋರಿಸುವ ಮೂಲಕ ರೈಲಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ, ಬಿಜಿ ಪಾಟೀಲ್, ಶಾಸಕ ಅವಿನಾಶ್ ಜಾಧವ್, ಪಾಲುಕೆ ಮಹಾಪೌರರಾದ ಅಜ್ಮಲ್ ಗೋಲಾ, ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ, ಸೋಲಾಪುರ ರೈಲ್ವೆ ವಿಭಾಗದ ಹಿರಿಯ ಡಿಸಿಎಂ ಜೈದೀಪ್ ಪ್ರದಿಕ್ಷಣೆ, ಹಿರಿಯ ಡಿಪಿಒ ದೀಪಿಂಗ್ ಕುಮಾರ್ ಸಿಂಗ್, ಹಿರಿಯ ಡಿಇಎನ್ ಸೌರವ್ ಕುಮಾರ್ ಹಾಗೂ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಅವಿರಾಜ್ ಇಂಗ್ಲೆ ಉಪಸ್ಥಿತರಿದ್ದರು.
ಆಧುನಿಕ ಸೌಲಭ್ಯಗಳ ರೈಲು; ನೂತನ ರೈಲು ಬೆಂಗಳೂರು ಮತ್ತು ಮುಂಬೈ ನಡುವಿನ ಸಂಪರ್ಕವನ್ನು ಹೆಚ್ಚಿಸಲಿದ್ದು, ಭಾರತದ ಐಟಿ ಮತ್ತು ಸ್ಟಾರ್ಟ್ಅಪ್ ರಾಜಧಾನಿಯನ್ನು ಆರ್ಥಿಕ ರಾಜಧಾನಿಯೊಂದಿಗೆ ಬೆಸೆಯಲಿದೆ. ಉದ್ಯೋಗಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಪ್ರವಾಸಿಗರಿಗೆ ಆಧುನಿಕ ರಾತ್ರಿ ಪ್ರಯಾಣದ ಸೌಲಭ್ಯ ದೊರೆಯಲಿದ್ದು. ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಆರಾಮದಾಯಕ ಬರ್ತ್ಗಳು, ಬಯೋ ವ್ಯಾಕ್ಯೂಮ್ ಶೌಚಾಲಯ, ಜಿಪಿಎಸ್, ಎಲ್ಇಡಿ ಲೈಟಿಂಗ್, ಸ್ವಯಂಚಾಲಿತ ಬಾಗಿಲುಗಳು ಹಾಗೂ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಇರಲಿದೆ. ಪ್ರಯಾಣಿಕರಿಗೆ ತುರ್ತು ಸಂದರ್ಭದಲ್ಲಿ ಅಲಾರಂ ವ್ಯವಸ್ಥೆಯೂ ಸೌಲಭ್ಯ ಒದಗಿಸಲಿದೆ.






