Kalaburagi | ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಜಿಎಸ್‌ಟಿ ಪ್ರಮುಖ ಆಧಾರಸ್ತಂಭ : ಪ್ರೊ.ಬಟ್ಟು ಸತ್ಯನಾರಾಯಣ

ಕಲಬುರಗಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ದೇಶದ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಬಲ ನೀಡಿದ್ದು, ವಿಕಸಿತ ಭಾರತ–2047 ಗುರಿ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಾನೂನು ವಿಭಾಗ ಹಾಗೂ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ (ಐಸಿಎಸ್ಎಸ್ಆರ್), ನವದೆಹಲಿ ಸಹಯೋಗದಲ್ಲಿ ಆಯೋಜಿಸಿದ್ದ “ಜಿಎಸ್‌ಟಿ ಸುಧಾರಣೆಗಳು ಮತ್ತು ಭಾರತದ ಸಾಮಾಜಿಕ-ಆರ್ಥಿಕ ಪರಿವರ್ತನೆ: 2047ರ ವಿಕಸಿತ ಭಾರತಕ್ಕೆ ಸಾಧನೆಯ ಮಾರ್ಗ” ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2017ರ ಜುಲೈ 1ರಂದು ಜಾರಿಗೆ ಬಂದ “ಒಂದು ರಾಷ್ಟ್ರ–ಒಂದು ತೆರಿಗೆ” ಪರಿಕಲ್ಪನೆಯು ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿದ್ದು, ತೆರಿಗೆ ವಂಚನೆ ಕಡಿಮೆ ಮಾಡಿ ಸರ್ಕಾರದ ಆದಾಯ ಹೆಚ್ಚಿಸಿದೆ. ಈ ಆದಾಯವನ್ನು ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಹಾಗೂ ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಬಳಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆತಿದೆ ಎಂದು ಹೇಳಿದರು.
ಸಿ.ಜಿ.ಎಸ್.ಟಿ., ಎಸ್.ಜಿ.ಎಸ್.ಟಿ. ಹಾಗೂ ಐ.ಜಿ.ಎಸ್.ಟಿ. ವ್ಯವಸ್ಥೆಗಳು ಕೇಂದ್ರ-ರಾಜ್ಯಗಳ ನಡುವಿನ ಹಣಕಾಸು ಸಹಕಾರವನ್ನು ಮತ್ತಷ್ಟು ಬಲಪಡಿಸಿದ್ದು, ಸಮತೋಲಿತ ಅಭಿವೃದ್ಧಿಗೆ ನೆರವಾಗಿವೆ. ವಿದ್ಯಾರ್ಥಿಗಳು ಜಿಎಸ್‌ಟಿಯ ಉದ್ದೇಶ, ಕಾರ್ಯವೈಖರಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಅದರ ಮಹತ್ವವನ್ನು ಸಮಗ್ರವಾಗಿ ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಭಾಷಣ ಮಾಡಿದ ಪಾಟ್ನಾದ ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಪ್ರೊ. ಸುಭಾಷ್ ಚಂದ್ರ ರಾಯ್, ತೆರಿಗೆ ವ್ಯವಸ್ಥೆಯು ಉತ್ತಮ ಆಡಳಿತ, ಸಾರ್ವಜನಿಕ ಕಲ್ಯಾಣ ಹಾಗೂ ಆರ್ಥಿಕ ಪ್ರಗತಿಗೆ ಭದ್ರ ಅಡಿಪಾಯವಾಗಿದೆ ಎಂದು ಹೇಳಿದರು.
ಜಿಎಸ್‌ಟಿ ಜಾರಿಯಾದ ಬಳಿಕ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಏಕರೂಪತೆ ಹೆಚ್ಚಿದ್ದು, ಜನಸ್ನೇಹಿ ತೆರಿಗೆ ಆಡಳಿತ ಮತ್ತು ಸ್ವಯಂಪ್ರೇರಿತ ತೆರಿಗೆ ಪಾವತಿಗೆ ಉತ್ತೇಜನ ದೊರೆತಿದೆ. ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಅಭಿವೃದ್ಧಿಯ ನಡುವೆ ಸಮತೋಲನ ಸಾಧಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕಾನೂನು ಅಧ್ಯಯನ ನಿಕಾಯದ ಡೀನ್ ಪ್ರೊ. ಬಸವರಾಜ ಎಂ. ಕುಬಕಡ್ಡಿ, ತೆರಿಗೆ ವ್ಯವಸ್ಥೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದ್ದು, ತೆರಿಗೆ ಆದಾಯವನ್ನು ಸರ್ಕಾರ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬಳಸುತ್ತಿದೆ ಎಂದು ತಿಳಿಸಿದರು. ಜಿಎಸ್‌ಟಿ ಜಾರಿಯಾದ ಬಳಿಕ ದೇಶದ ಪರೋಕ್ಷ ತೆರಿಗೆ ವ್ಯವಸ್ಥೆ ಏಕೀಕೃತಗೊಂಡು ತೆರಿಗೆ ಅನುಸರಣೆ ಹಾಗೂ ಸರ್ಕಾರದ ಆದಾಯ ಎರಡೂ ಹೆಚ್ಚಾಗಿವೆ ಎಂದರು.
ಸಮ್ಮೇಳನದ ಸಂಚಾಲಕ ಡಾ. ಜಯಂತ ಬೊರುವಾ ಸ್ವಾಗತಿಸಿ ಸಮ್ಮೇಳನದ ಉದ್ದೇಶ ವಿವರಿಸಿದರು. ಕಾನೂನು ವಿಭಾಗದ ಮುಖ್ಯಸ್ಥ ಡಾ. ಅನಂತ್ ಡಿ. ಚಿಂಚುರೆ ವಂದಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಡಾ. ಬಿ.ವಿ. ಮುರಳಿಕೃಷ್ಣ, ಆದಾಯ ತೆರಿಗೆ ಆಯುಕ್ತ ವಿನೋದ್ ಕುಮಾರ್, ವಿವಿಧ ನಿಕಾಯಗಳ ಡೀನ್‌ಗಳು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ರಾಜ್ಯದ ವಿವಿಧ ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.






