ಕಲಬುರಗಿ | ಗುಲ್ಬರ್ಗಾ ವಿವಿ ಮೌಲ್ಯಮಾಪನ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ ವರ್ಗಾವಣೆ

ಕಲಬುರಗಿ : ಪದವಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆಯ ವಿಳಂಬ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ ಅವರನ್ನು ವರ್ಗಾವಣೆ ಮಾಡಿ ಉನ್ನತ ಶಿಕ್ಷಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.
ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರೊ.ಮೇಧಾವಿನಿ ಕಟ್ಟಿ ಅವರನ್ನು ಗುಲ್ಬರ್ಗಾ ಮೌಲ್ಯಮಾಪನ ಕುಲಸಚಿವೆ ಹುದ್ದೆಯಿಂದ ಬಿಡುಗಡೆಗೊಳಿಸಿ, ಮಾತೃ ವಿಶ್ವವಿದ್ಯಾಲಯ ವಾದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಹಿಂದಿರುಗಿಸಿ ಆದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಶಶಿಕಲಾ.ಸಿ ಅವರು ಹೊರಡಿಸಿದ ದೇಶದಲ್ಲಿ ತಿಳಿಸಲಾಗಿದೆ.
ಬಳ್ಳಾರಿಯಲ್ಲಿರುವ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಯಾವ ಹುದ್ದೆಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿಲ್ಲ. ಈ ಬಗ್ಗೆ ಪ್ರೊ.ಮೇಧಾವಿನಿ ಕಟ್ಟಿ ಅವರನ್ನು ಸಂಪರ್ಕಿಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಕೆಲ ದಿನಗಳ ಹಿಂದಷ್ಟೇ ಕಲಬುರಗಿ ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ್ ನೇತೃತ್ವದ ಅಧಿಕಾರಿಗಳ ತಂಡವು ಎರಡು ದಿನಗಳ ಕಾಲ ಪ್ರೊ.ಮೇಧಾವಿನಿ ಅವರನ್ನೂ ವಿಚಾರಣೆಗೆ ಒಳಪಡಿಸಿತ್ತು.





