ಕಲಬುರಗಿ | ವಿದ್ಯಾರ್ಥಿಗಳ ಉತ್ತೀರ್ಣಕ್ಕೆ ಮುಖ್ಯ ಶಿಕ್ಷಕರು ಶ್ರಮಿಸಿ : ಬಿ.ಫೌಝಿಯಾ ತರನ್ನುಮ್

ಕಲಬುರಗಿ: ಜಿಲ್ಲೆಯ ಪ್ರತಿಯೊಂದು ಶಾಲೆಯೂ ಶೇ.100 ಫಲಿತಾಂಶ ಸಾಧಿಸುವ ಗುರಿ ಹೊಂದಬೇಕು. ಕೇವಲ ತೇರ್ಗಡೆ ಸಾಕಾಗುವುದಿಲ್ಲ, ವಿದ್ಯಾರ್ಥಿಗಳು ಗಳಿಸುವ ಅಂಕಗಳ ಗುಣಮಟ್ಟವೂ ಹೆಚ್ಚಾಗಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಹೇಳಿದರು.
ಶುಕ್ರವಾರ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕಲಬುರಗಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ 2025–26ನೇ ಸಾಲಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
2025–26ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆ–1ರ ಫಲಿತಾಂಶವನ್ನು ತಾಲೂಕುವಾರು ಹಾಗೂ ಶಾಲಾವಾರು ವಿಶ್ಲೇಷಣೆ ಮಾಡಲಾಗಿದೆ. ಮುಂದಿನ ಪೂರ್ವಸಿದ್ಧತಾ ಪರೀಕ್ಷೆ–2, 3 ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಬರೆಯುವಂತೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಹೆಚ್ಚಿನ ಪ್ರಯತ್ನ ವಹಿಸಬೇಕು ಎಂದು ಸೂಚಿಸಿದರು.
ಫಲಿತಾಂಶ ಸುಧಾರಣೆ ಕೇವಲ ಡಿಡಿಪಿಐ, ಡಯೆಟ್ ಅಥವಾ ಬಿಇಒ ಅವರ ಹೊಣೆಗಾರಿಕೆ ಅಲ್ಲ. ಎಲ್ಲ ಶಿಕ್ಷಕರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಮಕ್ಕಳ ಭವಿಷ್ಯಕ್ಕೆ ಬೆಳಕಾಗುತ್ತದೆ ಎಂದರು.
ಕಾರ್ಯಾಗಾರಕ್ಕೆ ಹಾಜರಾಗದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶಂಕ್ರಮ್ಮ ಡವಳಗಿ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಅಂತಹ ಮಕ್ಕಳನ್ನು ಶಿಕ್ಷಕರು ದತ್ತು ಪಡೆದು ವಿಶೇಷ ತರಬೇತಿ ನೀಡಬೇಕು. ಕಳೆದ ಒಂದು ವರ್ಷದಿಂದ ಕಲಬುರಗಿ ಜಿಲ್ಲೆ ಪರೀಕ್ಷಾ ಫಲಿತಾಂಶದಲ್ಲಿ ಹಿಂದುಳಿದಿದ್ದು, ಅದನ್ನು ಸುಧಾರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಮಾತನಾಡಿ, ಪರೀಕ್ಷೆಗೆ ಇನ್ನೂ ಕೇವಲ 54 ದಿನಗಳು ಮಾತ್ರ ಉಳಿದಿದ್ದು, ಈ ಅವಧಿಯಲ್ಲಿ ಶಿಕ್ಷಕರ ಶ್ರಮ ಅತ್ಯಗತ್ಯ ಎಂದು ತಿಳಿಸಿದರು. ಮೈಕ್ರೋ ಪ್ಲಾನ್ ರೂಪಿಸಿಕೊಳ್ಳಿ, ಸರ್ಕಾರದ ಸುತ್ತೋಲೆಗಳ ಅಂಶಗಳನ್ನು ಅಭ್ಯಾಸ ಮಾಡಿಸಿ, 29 ಅಂಶಗಳು ಹಾಗೂ 40+ ಮಿಷನ್ ಅನುಸರಿಸಿ, ನೀಲನಕ್ಷೆ ಆಧಾರಿತವಾಗಿ ಪಠ್ಯಾಭ್ಯಾಸ ಮಾಡಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ಶೆಟ್ಟಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಅಪರ ಆಯುಕ್ತರ ಕಚೇರಿಯ ಸಹ ನಿರ್ದೇಶಕ ನಾಗೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.







