ಕಲಬುರಗಿ | ಖಾಸಗಿ ಚರ್ಮರೋಗ ಚಿಕಿತ್ಸಾ ಕೇಂದ್ರಗಳ ಮೇಲೆ ಆರೋಗ್ಯ ಅಧಿಕಾರಿಗಳಿಂದ ದಾಳಿ: ದಾಖಲೆ ಪರಿಶೀಲನೆ

ಕಲಬುರಗಿ: ಕೆ.ಪಿ.ಎಮ್.ಇ ಕಾಯ್ದೆಯಡಿಯಲ್ಲಿ ನೋಂದಣಿಯಾದ ಮತ್ತು ಅನಧಿಕೃತ ಚರ್ಮರೋಗ ವೈದ್ಯಕೀಯ ಪದವಿ ಪಡೆಯದೇ ಖಾಸಗಿ ಚಿಕಿತ್ಸೆ ನಡೆಸುತ್ತಿರುವ ದೂರುಗಳನ್ನು ಆಧರಿಸಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ.
ಕಲಬುರಗಿ ನಗರದಲ್ಲಿ ಅನಧಿಕೃತವಾಗಿ ಚರ್ಮ ರೋಗ ಚಿಕಿತ್ಸೆ ನೀಡುವ ಬಗ್ಗೆ ಜಿಲ್ಲಾಧಿಕಾರಿಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಗುರುವಾರ ನಗರದ ವಿವಿಧ ಮೂರು ಚಿಕಿತ್ಸಾ ಕೇಂದ್ರಗಳ ಮೇಲೆ ಆರೋಗ್ಯ ಅಧಿಕಾರಿಗಳ ತಂಡ ದಾಳಿ ನಡೆಸಿದರು.
ಅಧಿಕಾರಿಗಳ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮೂರು ಚಿಕಿತ್ಸಾ ಕೇಂದ್ರಗಳ ಮೇಲೆ ಅನಿರೀಕ್ಷಿತ ದಾಳಿ ಕೈಗೊಂಡು ದಾಖಲೆಗಳನ್ನು ಪಡೆದು, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಕಲ್ಯಾಣಣಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ್ ವಾರ್ತಾಭಾರತಿಗೆ ತಿಳಿಸಿದ್ದಾರೆ.
ದಾಳಿಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾದೇವಿ ನಿಗ್ಗುಡಗಿ, ಜಿಲ್ಲಾ ಆಸ್ಪತ್ರೆ ಚರ್ಮ ರೋಗ ತಜ್ಞರಾದ ಡಾ.ಪ್ರಸಾದ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಾರುತಿ ಕಾಂಬ್ಳೆ , ಜಿಲ್ಲಾ ದಂತ ಬಾಯಿ ಆರೋಗ್ಯ ಅಧಿಕಾರಿ ಡಾ.ಸಂಧ್ಯಾ ಕನೆಕರ್, ಆಕಾಶ್, ಪ್ರಕಾಶ್ ಸೇರಿದಂತೆ ಸಿಬ್ಬಂದಿಗಳು ಇದ್ದರು.







