ಕಲಬುರಗಿ | ಭಾರೀ ಮಳೆ : ರಸ್ತೆ ಸಂಪರ್ಕ ಕಡಿತ

ಕಲಬುರಗಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಗುರುವಾರ ಮತ್ತೆ ಸುರಿದ ಮಳೆಯಿಂದಾಗಿ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಈ ಕುರಿತು ಮಾತನಾಡಿದ ಸ್ಥಳೀಯರು, ಸುಲೇಪೇಟ ಗ್ರಾಮದ ನಾಡಕಚೇರಿ ಹಾಗೂ ಸರ್ಕಾರಿ ಶಾಲೆಗೆ ಕಲ್ಪಿಸುವ ಮುಖ್ಯ ರಸ್ತೆ ಮಳೆ ನೀರಿನಿಂದ ಸಂಪೂರ್ಣವಾಗಿ ಜಲಾವೃತವಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಕೂಡಲೇ ಇದಕ್ಕೊಂದು ವ್ಯವಸ್ಥೆ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ವಿವಿಧ ಗ್ರಾಮಗಳಿಂದ ಆಗಮಿಸುವ ವಿದ್ಯಾರ್ಥಿಗಳು ಇಲ್ಲಿನ ಸರ್ಕಾರಿ ಕನ್ಯಾ ಪ್ರೌಢ ಶಾಲೆ, ಸರ್ಕಾರಿ ಉರ್ದು ಪ್ರೌಢ ಶಾಲೆಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ, ನಾಡ ಕಚೇರಿ, ವಿವಿಧ ಇಲಾಖೆಗಳ ವಸತಿ ನಿಲಯಗಳು, ಆಶ್ರಯ ಕಾಲೂನಿಗೆ ಕಲ್ಪಿಸುವ ಮುಖ್ಯ ರಸ್ತೆಯಾಗಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ.
ಈ ಪ್ರಮುಖ ರಸ್ತೆಗೆ ಶಾಶ್ವತ ಪರಿಹಾರ ಒದಗಿಸಬೇಕು. ನೀರು ಹಾದು ಹೊಗಲು ಡ್ರೈನೆಜ್ ನಿರ್ಮಿಸಿದರೆ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಆದರೆ ಜನರಿಗೆ ಅವಶ್ಯಕತೆ ವಿರುವ ಅಗತ್ಯ ಅಭಿವೃದಿ ಕಾಮಗಾರಿ ಮಾಡಲು ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಸ್ಥಳೀಯ ಲಾಡ್ಲೆಸಾಬ್ ತಾಂಡೂರು ಅವರು ದೂರಿದ್ದಾರೆ.







