ಕಲಬುರಗಿ ಹೈಕೋರ್ಟ್ ಸಿಬ್ಬಂದಿ ತೆರಳುತ್ತಿದ್ದ ಕಾರು ಗೋವಾದಲ್ಲಿ ಅಪಘಾತ: ಓರ್ವ ಮೃತ್ಯು, ಮೂವರಿಗೆ ಗಂಭೀರ ಗಾಯ

ಕಲಬುರಗಿ: ಕಲಬುರಗಿ ಹೈಕೋರ್ಟ್‌ನ ನಾಲ್ವರು ಸಿಬ್ಬಂದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಓರ್ವ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಗೋವಾದ ಮಾರ್ಡೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಕರ್ನಾಟಕದ ಕಲಬುರಗಿ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಸಹೋದ್ಯೋಗಿಗಳು ಬಲೇನೋ ಕಾರಿನಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದರು. ಮಾರ್ಡೋಳ ಪೊಲೀಸ್ ಠಾಣೆ ವ್ಯಾಪ್ತಿಯ ಬಾನಶ್ರೀ ಬಮ್ಮಾ ಪ್ರದೇಶದಲ್ಲಿ ಕಾರು ನಿಯಂತ್ರಣ ತಪ್ಪಿ ದೇವಸ್ಥಾನದ ಕಟ್ಟಡದ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಕಾರಿನ ಹಿಂಬದಿ ಆಸನದಲ್ಲಿ ಕುಳಿತಿದ್ದ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಮೃತ ಸಿಬ್ಬಂದಿಯ ಮೃತದೇಹವನ್ನು ಮಡಗಾಂವಿನ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಅಪಘಾತದ ಕುರಿತು ಗೋವಾದ ಮಾರ್ಡೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






