ಕಲಬುರಗಿ | ಶರಣಬಸವ ವಿಶ್ವವಿದ್ಯಾಲಯದಲ್ಲಿ ಉನ್ನತ ದರ್ಜೆಯ ಇಂಟೆಲ್ ಪ್ರಯೋಗಾಲಯ ಲೋಕಾರ್ಪಣೆ

ಕಲಬುರಗಿ : ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ನಲ್ಲಿರುವ ಇಂಟೆಲ್ ಉನ್ನತಿ ಕೇಂದ್ರದಲ್ಲಿ ಇತ್ತೀಚಿನ ಉನ್ನತ ದರ್ಜೆಯ ಇಂಟೆಲ್ ಪ್ರಯೋಗಾಲಯವನ್ನು ಸ್ಥಾಪಿಸುವ ಮೂಲಕ ಶರಣಬಸವ ವಿಶ್ವವಿದ್ಯಾಲಯವು ದೇಶದ ಆಯ್ದ ವಿಶ್ವವಿದ್ಯಾಲಯಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಹೇಳಿದರು.
ಶನಿವಾರ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ನಲ್ಲಿರುವ ಉನ್ನತ ದರ್ಜೆಯ ಪ್ರಯೋಗಾಲಯವನ್ನು, ವಿವಿಯ ಉಪಕುಲಪತಿ ಪ್ರೊ.ಅನಿಲ ಕುಮಾರ್ ಬಿಡವೆ, ಕುಲಸಚಿವ ಡಾ.ಎಸ್.ಜಿ.ಡೊಳ್ಳೇಗೌಡರ್, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ ಮತ್ತು ವಿಶ್ವವಿದ್ಯಾಲಯದ ಇತರ ಅಧಿಕಾರಿಗಳು ಮತ್ತು ವಿವಿಧ ಅಧ್ಯಾಪಕರ ಸಮ್ಮುಖದಲ್ಲಿ ಉದ್ಘಾಟಿಸಿದರು.
ಪ್ರಯೋಗಾಲಯವನ್ನು 2 ಕೋಟಿ ರೂ. ಗಳಿಗೂ ಹೆಚ್ಚು ವೆಚ್ಚದಲ್ಲಿ ಸ್ಥಾಪಿಸಲಾಗಿದೆ ಮತ್ತು ಪ್ರಯೋಗಾಲಯದಲ್ಲಿ ಸ್ಥಾಪಿಸಲು ಇಂಟೆಲ್ ಇತ್ತೀಚಿನ ಹೈಸ್ಪೀಡ್ ಸರ್ವೆರ್ಗಳು, ಕಾರ್ಯಸ್ಥಳಗಳು ಮತ್ತು ಸಾಫ್ಟ್ವೇರ್ಗಳನ್ನು ಸಬ್ಸಿಡಿ ದರದಲ್ಲಿ ಪೂರೈಸಿದೆ. ದೇಶದಲ್ಲಿ ಕೆಲವೇ ಕೆಲವು ವಿಶ್ವವಿದ್ಯಾಲಯಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮಶಿನ್ ಲರ್ನಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾ ಸೈನ್ಸ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೆಷನ್ ಹಾಗೂ ಕಂಪ್ಯೂಟರ್ ಸೈನ್ಸ್ಗೆ ಸಂಬಂಧಿಸಿದ ಇತರ ಇಂಜಿನಿಯರಿಂಗ್ ಕೋರ್ಸ್ಗಳನ್ನು ಒಳಗೊಂಡಂತೆ ಇಂಜಿನಿಯರಿಂಗ್ ಶಿಕ್ಷಣದ ಉದಯೋನ್ಮುಖ ಕ್ಷೇತ್ರಗಳನ್ನು ಅನುಸರಿಸುವವರಿಗೆ ಪ್ರಾಯೋಗಿಕ ಅನುಭವ ಮತ್ತು ತರಬೇತಿಯನ್ನು ಒದಗಿಸಲು ಇಂತಹ ಉನ್ನತ ಮಟ್ಟದ ಪ್ರಯೋಗಾಲಯವನ್ನು ಹೊಂದಿವೆ.
ಈ ಪ್ರಯೋಗಾಲಯವು ವಿದ್ಯಾರ್ಥಿಗಳು ಸುಧಾರಿತ ಕಂಪ್ಯೂಟರಿಂಗ್ ಕಲಿಯಲು ಅನುವು ಮಾಡಿಕೊಡುತ್ತದೆ ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ನೈಜ ಸಮಯದ ತರಬೇತಿಯನ್ನು ನೀಡಬಹುದು ಎಂದು ಪ್ರೊಫೆಸರ್ ಬಿಡವೆ ಹೇಳಿದರು. ವಿದ್ಯಾರ್ಥಿಗಳು ತಮ್ಮ ಪ್ರೋಜೆಕ್ಟರ್‌ಗಳನ್ನು ಸಹ ಇಲ್ಲಿ ಮಾಡಬಹುದು ಮತ್ತು ಕೋರ್ಸ್ ಅವಧಿಯ ಕೊನೆಯಲ್ಲಿ ಇಂಟರ್ನ್ಶಿಪ್ ಗೆ ದಾಖಲಾಗಬಹುದು ಹಾಗೂ ಕಡ್ಡಾಯ ಇಂಟರ್ನ್ಶಿಪ್ ಗಳಿಗಾಗಿ ಬೇರೆ ಸಾಫ್ಟ್ ವೇರ್ ಕಂಪನಿಗಳನ್ನು ಹುಡುಕುವ ಅಗತ್ಯವಿಲ್ಲ ಎಂದರು.
ಡಾ.ಅವ್ವಾಜಿ ಅವರು ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಅಧ್ಯಾಪಕರೊಂದಿಗೆ ಸಂಕ್ಷಿಪ್ತವಾಗಿ ಸಂವಹನ ನಡೆಸಿ, ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಉನ್ನತ ಮಟ್ಟದ ಪ್ರಯೋಗಾಲಯವನ್ನು ಉದ್ಘಾಟಿಸಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿದರು ಮತ್ತು ವಿಶ್ವವಿದ್ಯಾಲಯವು ವಿಸ್ತರಿಸಿರುವ ಸೌಲಭ್ಯದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಪೂರ್ಣ ಹವಾನಿಯಂತ್ರಿತ ಪ್ರಯೋಗಾಲಯವು ವಿದ್ಯಾರ್ಥಿಗಳು ತಮ್ಮ ಪ್ರಾಯೋಗಿಕ ತರಬೇತಿಯನ್ನು ಮುಂದುವರಿಸಲು ಹೆಚ್ಚಿನ ವೇಗದ ಕಂಪ್ಯೂಟರ್ ಗಳನ್ನು ಹೊಂದಿದೆ ಮತ್ತು ಪ್ರಯೋಗಾಲಯದ ಒಂದು ವೈಶಿಷ್ಟ್ಯವೆಂದರೆ ವಿದ್ಯಾರ್ಥಿಗಳು ಇತ್ತೀಚಿನ ಸೌಲಭ್ಯದ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಅನುವು ಮಾಡಿಕೊಡಲು ಇದನ್ನು ಇತರ ವಿಭಾಗಗಳಲ್ಲಿನ ಇತರ ಕಂಪ್ಯೂಟರ್ ಪ್ರಯೋಗಾಲಯಗಳೊಂದಿಗೆ ನೆಟ್‌ವರ್ಕ್ ಮಾಡಲಾಗಿದೆ.







