Kalaburagi | ನಿರಂತರ ಅಭ್ಯಾಸದಿಂದ ಉನ್ನತ ಹುದ್ದೆ ಸಾಧ್ಯ: ಶರಣಬಸಪ್ಪ ಸುಬೇದಾರ್

ಕಲಬುರಗಿ: ವಿದ್ಯಾರ್ಥಿಗಳು ನಿರಂತರವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಾಗ ಮಾತ್ರ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ ಎಂದು ಎಸಿಪಿ ಶರಣಬಸಪ್ಪ ಸುಬೇದಾರ್ ಹೇಳಿದರು.
ನಗರದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಆರು ದಿನಗಳ ದಿಕ್ಸೂಚಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಕಾಲೇಜಿನ ಜೀವನವು ಶಾಲಾ ಶಿಕ್ಷಣಕ್ಕಿಂತ ವಿಭಿನ್ನ ಅನುಭವ ನೀಡುತ್ತದೆ. ಇಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ, ನಾಯಕತ್ವ ಗುಣ, ಸಮಯಪಾಲನೆ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾವಿದ್ಯಾಲಯವು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಬೆಳೆಯಲು ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಹುದ್ದೆಗೇರಬೇಕು ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುರೇಶಕುಮಾರ ನಂದಗಾಂವ್ ಮಾತನಾಡಿ, ಕಾಲೇಜಿನ ನುರಿತ ಅಧ್ಯಾಪಕರು, ಗ್ರಂಥಾಲಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಎನ್‌ಎಸ್‌ಎಸ್ ಹಾಗೂ ವಿವಿಧ ಕಾರ್ಯಾಗಾರಗಳ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಶೈಕ್ಷಣಿಕ ಸಾಧನೆಯೊಂದಿಗೆ ಸರ್ವತೋಮುಖ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಸಲಹೆ ನೀಡಿದರು.
ಡಾ. ಆರತಿ ರಾಮಚಂದ್ರ ಸ್ವಾಗತಿಸಿದರೆ, ಪ್ರೊ. ಅನಿತಾ ಗೊಬ್ಬುರ್ ನಿರೂಪಿಸಿದರು. ಬಿ.ಎ 3ನೇ ಸೆಮಿಸ್ಟರ್ ವಿದ್ಯಾರ್ಥಿನಿ ಕು.ಫಾಯಜಾ ಖಾನುಮ ಪ್ರಾಸ್ತಾವಿಕ ಮಾತನಾಡಿದರು. ಡಾ. ಲಕ್ಷ್ಮೀಪುತ್ರ ವಂದಿಸಿದರು. ನಂತರ ಶರಣಬಸವ ವಿವಿಯ ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ ಕಾಗೆ ಅವರು ತರಗತಿಯಲ್ಲಿ ಎಐ ಬಳಕೆ ವಿಷಯದ ಕುರಿತು ಉಪನ್ಯಾಸ ನೀಡಿದರು. ಡಾ.ಮಿಲಿಂದಕುಮಾರ ಸುಳ್ಳದ್, ಡಾ.ಶಿವರಾಜ ಶಾಸ್ತ್ರಿ ಹೆರೂರ್, ಡಾ.ವಿಜಯಲಕ್ಷ್ಮಿ, ಡಾ.ಸುನಿತಾ, ಫೊ.ರೇಶ್ಮಾ ಇದ್ದರು.






