Kalaburagi | ಸೆ.19ರಂದು ಜಿಲ್ಲಾದ್ಯಂತ ಹೋಬಳಿ ಮಟ್ಟದ ‘ಪ್ರಜಾ ಸೇವೆ' ಸಭೆ: ಇಕ್ರಮ್ ಶರೀಫ್

ಕಲಬುರಗಿ: ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಪ್ರಜಾ ಸೇವಾ ಆಂದೋಲನದ ಅಂಗವಾಗಿ ಕಲಬುರಗಿ ಜಿಲ್ಲೆಯಾದ್ಯಂತ ಸೆ.19ರಂದು ಹೋಬಳಿ ಮಟ್ಟದ ಪ್ರಜಾ ಸೇವೆ ಸಭೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆಗಳು ನಡೆಯಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳು ಮತ್ತು ಸೇವಾ ಸಂಬಂಧಿತ ಅರ್ಜಿಗಳನ್ನು ನೇರವಾಗಿ ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ.
ಸಭಾ ಸ್ಥಳಗಳಲ್ಲಿ ಪಂಚಾಯತ್‌ವಾರು ಹಾಗೂ ಇಲಾಖಾವಾರು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ಸಾರ್ವಜನಿಕರು ತಮಗೆ ಅಗತ್ಯವಿರುವ ಸೇವೆ ಅಥವಾ ಅಹವಾಲಿಗೆ ಸಂಬಂಧಿಸಿದ ನಮೂನೆ-3 ಅನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಕಡ್ಡಾಯವಾಗಿ ನಮೂನೆ-5 ರಲ್ಲಿ ಸ್ವೀಕೃತಿ ರಸೀದಿಯನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಮನೆಬಾಗಿಲಿಗೆ ಆಡಳಿತವನ್ನು ಕೊಂಡೊಯ್ಯುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಪಡೆಯುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಕಲಬುರಗಿ, ಕಾಳಗಿ, ಕಮಲಾಪುರ, ಸೇಡಂ, ಶಹಾಬಾದ್ ಹಾಗೂ ಯಡ್ರಾಮಿ ತಾಲೂಕುಗಳ ವಿವಿಧ ಹೋಬಳಿ ಕೇಂದ್ರಗಳಲ್ಲಿ ಬೆಳಿಗ್ಗೆ 10ರಿಂದ 11 ಗಂಟೆಯೊಳಗೆ ಸಭೆಗಳು ಆರಂಭವಾಗಲಿವೆ.






