Kalaburagi | ಸಮ ಸಮಾಜ ನಿರ್ಮಾಣಕ್ಕೆ ಮಾನವೀಯ ಮೌಲ್ಯ ಅಗತ್ಯ : ಗುರುಮಾತಾ ನಂದಾತಾಯಿ

ಕಲಬುರಗಿ: “ಹೊಸ ವಿಚಾರಧಾರೆಗಳೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮ ಸಮಾಜ ನಿರ್ಮಾಣ ಮಾಡೋಣ” ಎಂದು ಧಾರವಾಡದ ಗುರುದೇವ ತಪೋವನದ ಗುರುಮಾತಾ ನಂದಾತಾಯಿ ಕರೆ ನೀಡಿದರು.
ಸಂಸ್ಕೃತಿಯ ನಾಯಕ ವಿಶ್ವಜ್ಯೋತಿ ಬಸವಣ್ಣನವರ 893ನೇ ಜಯಂತಿ ಅಂಗವಾಗಿ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಪರಿವರ್ತನಾ ಪ್ರತಿಷ್ಠಾನ ಕಲಬುರಗಿ ಹಾಗೂ ವಿಶ್ವ ಸಾಮರಸ್ಯ ವೇದಿಕೆ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ “ಶರಣರ ಮಹಾಸಂಗಮ” ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
“ಬಸವ ಎಂದರೆ ಕೇವಲ ಪ್ರಧಾನಿಯಲ್ಲ, ಬಿದ್ದವರನ್ನು ಎತ್ತುವಂತಹವನೇ ನಿಜವಾದ ಬಸವಣ್ಣ. ಅಂತಹ ಚಿಂತನೆ ಪ್ರತಿಯೊಬ್ಬರಲ್ಲೂ ಬರಬೇಕಾಗಿದೆ. ಆಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಸಾಹು ಮಹಾರಾಜ, ಮಹಾತ್ಮ ಫುಲೆ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಸವಣ್ಣನವರು ಸಮಾಜದ ಶೋಷಿತ ವರ್ಗಗಳನ್ನು ಮೇಲೆತ್ತುವ ವಿಚಾರಧಾರೆಗಳನ್ನು ಪ್ರತಿಪಾದಿಸಿದ್ದಾರೆ ಎಂದು ಉಲ್ಲೇಖಿಸಿದ ಅವರು, “ಓದಿದರೆ ಉಳಿತೀರಿ, ಇಲ್ಲದಿದ್ದರೆ ಅಳಿತೀರಿ ಎಂಬ ಬಸವಣ್ಣನವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಆದ್ದರಿಂದ ಇಂದಿನ ಪೀಳಿಗೆಗೆ ಶಿಕ್ಷಣ ನೀಡುವುದು ಅತ್ಯವಶ್ಯಕ” ಎಂದು ಹೇಳಿದರು.
ಮಳಖೇಡದ ಸಜ್ಜಾದ ನಸೀನ್ ಹಝರತ್ ಸಯ್ಯದ್ ಶಾಹ್ ಮುಸ್ತಾಫ ಖಾದ್ರಿ ಮಾತನಾಡಿ, “ಯಾವುದೇ ಧರ್ಮದಲ್ಲಿರಲಿ, ತಮ್ಮ ಧರ್ಮವನ್ನು ಗೌರವದಿಂದ ಪಾಲಿಸುವವನೇ ನಿಜವಾದ ಮಾನವ. ಪ್ರತಿಯೊಬ್ಬರೂ ಪರಸ್ಪರ ಧರ್ಮಗಳಿಗೆ ಗೌರವ ನೀಡಬೇಕು” ಎಂದು ಹೇಳಿದರು.
“ದೇಶದಲ್ಲಿ ಕೋಮುದ್ವೇಷದ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ. ಇಂತಹ ಘಟನೆಗಳನ್ನು ತಡೆಗಟ್ಟಲು ಸಾಮರಸ್ಯದ ವೇದಿಕೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ದಾವಣಗೆರೆಯ ಸಹಾಯಕ ಪ್ರಾಧ್ಯಾಪಕ ಡಾ. ವಿಶ್ವನಾಥ್ ಪಿ. ವಿಶೇಷ ಉಪನ್ಯಾಸ ನೀಡಿ ಬಸವಣ್ಣನವರ ಚಿಂತನೆಗಳು ಹಾಗೂ ಸಾಮಾಜಿಕ ಸಮಾನತೆ ಕುರಿತು ವಿವರಿಸಿದರು.
ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದ ಬಸವಕಲ್ಯಾಣದ ಡಾ.ಸಿದ್ದರಾಮ ಬೆಲ್ದಾಳ ಶರಣರು, ಮಲ್ಲಣ್ಣಪ್ಪ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ವೇದಮೂರ್ತಿ ಜ್ಞಾನೇಶ್ವರ ಮಹಾಸ್ವಾಮಿಗಳು, ಮುಹಮ್ಮದ್ ಮೌಲಾಲಿ ಮುತ್ಯಾ, ಡಾ.ಫಾರೂಕ್ ಮಣೂರ, ಹಣಮಂತ ಯಳಸಂಗಿ, ಜಿ. ಬಿ.ಉಮೇಶ್, ಬಾಲಾಜಿ ಘೋಡಕೆ, ಯಶೋಧಾ ಕಟಕೆ, ಜಗದೇವಪ್ಪಾ ಪಾಳಾ, ಮಲ್ಲಿಕಾರ್ಜುನ ಭಜಂತ್ರಿ, ದೇವಿದಾಸ, ಶಂಕರ ಹಡಪದ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಅರ್ಜುನ್ ಹತ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚಂದ್ರಕಾಂತ ತಳವಾರ ಸ್ವಾಗತಿಸಿದರು. ವೈ.ಎಸ್.ಇಂಗಳೆ ಅವರು ವಂದಿಸಿದರು. ಈ ಸಂದರ್ಭದಲ್ಲಿ ಸಂಘಟಕರಾದ ರಾಜೇಂದ್ರ ಕೊರಭಾ, ದಿಲೀಪ್ ನವಲೆ, ಶ್ರೀಶೈಲ ನಾಯ್ಕೋಡಿ, ಸೇರಿದಂತೆ ಹಲವರು ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಟಿಪ್ಪುಸುಲ್ತಾನ್ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರನಾಗಿದ್ದಾನೆ. ಆದರೆ ಇಂದಿನ ದಿನಗಳಲ್ಲಿ ಅಂತಹ ಹೋರಾಟಗಾರ ವಿರುದ್ಧ ತಪ್ಪು ಸಂದೇಶ ರವಾನೆಯಾಗುತ್ತಿರುವುದು ದುರಂತ. ಬುದ್ಧ, ಬಸವ, ಅಂಬೇಡ್ಕರ್ ಅವರುಗಳ ತತ್ವಗಳನ್ನು ನಿತ್ಯ ಅನುಸರಿಸಿದ್ದಲ್ಲಿ ಮಾತ್ರ ಬಹುತ್ವ ಭಾರತ ನಿರ್ಮಾಣ ಮಾಡಲು ಸಾಧ್ಯ.
-ಫಾರೂಕ್ ಮಣೂರ (ವೈದ್ಯ, ಸಮಾಜ ಸೇವಕ)






