Kalaburagi | ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಕಲಬುರಗಿ: ಸರ್ಕಾರದ ವಿವಿಧ ಯೋಜನೆಗಳು ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲು ಉದ್ದೇಶಿಸಿದ್ದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿ ಆಳಂದ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ (ಇಸಿ ಆಕ್ಟ್) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸೆಪ್ಟೆಂಬರ್ 27ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಕಲಬುರಗಿ–ಆಳಂದ ರಸ್ತೆಯ ಆಳಂದ ಪಟ್ಟಣದ ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ.
ಆಹಾರ ನಿರೀಕ್ಷಕಿ ಶ್ರೀದೇವಿ ಸಂಗಯ್ಯ ಮಠಪತಿ ಅವರ ದೂರಿನ ಮೇರೆಗೆ ಆಳಂದ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೆಎ-32 ಎಎ-4831 ನೋಂದಣಿ ಸಂಖ್ಯೆಯ ಐಚರ್ ವಾಹನದಲ್ಲಿ ಸರ್ಕಾರದ ವಿವಿಧ ಯೋಜನೆಗಳು ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಬೇಕಿದ್ದ 6,520 ಕೆ.ಜಿ. ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜಪ್ತಿಯಾದ ಅಕ್ಕಿಯ ಅಂದಾಜು ಮೌಲ್ಯ 2,28,200 ರೂ. ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಚಾಲಕ ಸಮೀರ್ (23) ಹಾಗೂ ವಾಹನದ ಮಾಲೀಕ ಶರಣು ಅವರಾದಿ, ಕಲಬುರಗಿ ನಿವಾಸಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






