Kalaburagi | ಬುದ್ಧ, ಬಸವ, ಅಂಬೇಡ್ಕರ್ ಅವರ ಸಂದೇಶಾಧರಿತ ಚಿತ್ರಕಲಾ ಶಿಬಿರ ಉದ್ಘಾಟನೆ

ಕಲಬುರಗಿ: ಜಗತ್ತಿನಾದ್ಯಂತ ಗೌತಮ ಬುದ್ಧ, ಬಸವಣ್ಣ ಹಾಗೂ ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ಗಂಭೀರ ಅಧ್ಯಯನಗಳು ನಡೆಯುತ್ತಿವೆ. ಮನುಷ್ಯ ಪ್ರೀತಿ ಮತ್ತು ಜೀವಕಾಳಜಿಯ ಸಂದೇಶಗಳನ್ನು ಚಿತ್ರಕಲೆಯ ಮೂಲಕ ಸಮಾಜಕ್ಕೆ ತಲುಪಿಸುವುದು ಸೃಜನಶೀಲ ಕಲಾವಿದರಿಂದ ಸಾಧ್ಯ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ಸೂರ್ಯಕಾಂತ ಸುಜ್ಯಾತ ಹೇಳಿದರು.
ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಸಂದೇಶಾಧಾರಿತ ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು 2,500 ವರ್ಷಗಳ ಹಿಂದೆ ಬುದ್ಧರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳನ್ನು ಬಸವಣ್ಣ ವಚನಗಳ ಮೂಲಕ ಜನರಿಗೆ ತಲುಪಿಸಿದರೆ, ಡಾ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ ಎಂದು ಹೇಳಿದರು.
ಸಾಹಿತ್ಯಕ್ಕಿಂತಲೂ ಚಿತ್ರಕಲೆ ಹೆಚ್ಚು ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದ್ದು, ಕಲೆ ಮತ್ತು ಸಾಹಿತ್ಯ ಜಾತಿಗೆ ಸೀಮಿತವಾಗಬಾರದು. ಸಮಾಜದಲ್ಲಿನ ಮೂಢನಂಬಿಕೆ, ಅಸಮಾನತೆ, ದ್ವೇಷ ಹಾಗೂ ಸಂಘರ್ಷಗಳನ್ನು ನಿವಾರಿಸುವ ಶಕ್ತಿ ಕಲೆ ಮತ್ತು ಸಾಹಿತ್ಯಕ್ಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಡಾ. ಪರಶುರಾಮ ಪಿ., ಕಳೆದ 14 ವರ್ಷಗಳಿಂದ ಯುವ ಕಲಾವಿದರನ್ನು ಬೆಳೆಸುವ ಉದ್ದೇಶದಿಂದ ವಿವಿಧ ಕಲಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಕಲಾವಿದರ ಕಲ್ಪನೆ, ಚಿಂತನೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಚಿತ್ರಕಲಾವಿದ ಬಸವರಾಜ ಎಲ್. ಜಾನೆ ಅವರು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಬಿಡಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕಲಾವಿದ ವಿ.ಬಿ. ಬಿರಾದಾರ ಮಾತನಾಡಿ, ಕಲಾವಿದರ ಬೆಳವಣಿಗೆಗೆ ಸಮಾಜದ ಪ್ರೋತ್ಸಾಹ ಹಾಗೂ ಪ್ರೇಕ್ಷಕರ ಬೆಂಬಲ ಅತ್ಯಗತ್ಯವಾಗಿದೆ. ಮಹನೀಯರ ಜೀವನ ಹಾಗೂ ಸಾಧನೆಗಳನ್ನು ಚಿತ್ರಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯ ಶಿಬಿರದಿಂದ ಸಾಧ್ಯವಾಗುತ್ತಿದೆ ಎಂದು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳ ಚಿತ್ರಕಲಾವಿದರು ಬಾಗವಹಿಸಿದ್ದರು. ವಿ.ಬಿ. ಬಿರಾದಾರ (ಕಲಬುರಗಿ), ಬಾಬುರಾವ್ ಎಚ್. (ಕಲಬುರಗಿ), ಶಿವಾನಂದ ಬಸವಂತಪ್ಪ (ಬೆಂಗಳೂರು), ಮಲ್ಲಿಕಾರ್ಜುನ ಕೊರಳ್ಳಿ (ಕಲಬುರಗಿ), ಸವಿತಾ ಕುಂಬಾರ (ಸೇಡಂ), ಸೂರ್ಯಕಾಂತ ನಂದೂರ (ಕಲಬುರಗಿ), ಜಗದೀಶ ಕಾಂಬಳೆ (ಕಲಬುರಗಿ), ಅಮಿತ ಕಮ್ಮಾರ (ವಿಜಯಪುರ), ಯಲ್ಲಪ್ಪ ಕಾಂಬಳೆ (ಶಾಹಬಾದ), ಗೌತಮ್ ಈರಣ್ಣ (ಆಳಂದ) ಸೇರಿದಂತೆ ಕಲಬುರಗಿ ಜಿಲ್ಲೆಯ ಕಲಾವಿದರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಲಬುರಗಿ ದೂರದರ್ಶನ ಕೇಂದ್ರದ ವಿಶ್ರಾಂತ ನಿರ್ದೇಶಕ ಎಂ.ಬಿ. ಪಾಟಿಲ, ಉಪನ್ಯಾಸಕ ಡಾ. ಕೆ. ಎಂ. ಕುಮಾರಸ್ವಾಮಿ, ಅಂಬಾರಾಯ ಚಿನಮಳ್ಳಿ, ರಾಮಗಿರಿ ಪೊಲೀಸ್ ಪಾಟೀಲ, ಸಿದ್ದು ಮರಗೋಳ, ಗುರುಲಿಂಗ ಅರಳಿ, ಅಣ್ಣಾರಾಯ ಹಂಗರಗಿ, ಚಿದಾನಂದ ಸುತಾರ, ರವಿಚಂದ್ರ ಬಿರಾದಾರ, ಉದಯಕುಮಾರ ಬಗಲಿ, ಶೈಲಜಾ ಬಿರಾದಾರ, ದಾನಯ್ಯ ಚೌಕಿಮ, ಕುಪೇಂದ್ರ ಸೇರಿದಂತೆ ಮುಂತಾದವರಿದ್ದರು. ಮಲ್ಲಿಕಾರ್ಜುನ ಕೊರಳ್ಳಿ ವಂದಿಸಿದರು. ಕಲಾವಿದ ಸೂರ್ಯಕಾಂತ ನಂದೂರ ಕಾರ್ಯಕ್ರಮ ನಿರೂಪಿಸಿದರು.






