Kalaburagi | ಬಹುಶಿಸ್ತೀಯ ಸಂಶೋಧನೆಗೆ ಇಇಜಿ ತಂತ್ರಜ್ಞಾನ ಬಳಕೆ ಹೆಚ್ಚಳ ಅಗತ್ಯ: ಪ್ರೊ.ಬಟ್ಟು ಸತ್ಯನಾರಾಯಣ

ಕಲಬುರಗಿ: ಎಲೆಕ್ಟ್ರೋಎನ್ಸೆಫಲೋಗ್ರಫಿ (ಇಇಜಿ) ಹಾಗೂ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಬಹುಶಿಸ್ತೀಯ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ಹಾಗೂ ಸಂಶೋಧನಾ ಸಹಯೋಗವನ್ನು ಬಲಪಡಿಸುವ ಅಗತ್ಯವಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಸಿಯುಕೆ ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನ ಶಾಲೆಯ ಮನೋವಿಜ್ಞಾನ ವಿಭಾಗ ಆಯೋಜಿಸಿದ್ದ ಮೂರು ದಿನಗಳ ಇಇಜಿ ಬಯೋಫೀಡ್‌ಬ್ಯಾಕ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೆದುಳಿನ ವಿದ್ಯುತ್ ತರಂಗಗಳನ್ನು ದಾಖಲಿಸುವ ಎಲೆಕ್ಟ್ರೋಎನ್ಸೆಫಲೋಗ್ರಫಿ (ಇಇಜಿ) ಹಾಗೂ ಸಂಬಂಧಿತ ಮನೋಶಾರೀರಿಕ ವಿಧಾನಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿತ್ತು ಎಂದು ತಿಳಿಸಿದರು.
ವಿವಿಧ ಶಿಸ್ತುಗಳ ಸಂಶೋಧಕರು ವಿಶ್ವವಿದ್ಯಾಲಯದಲ್ಲಿರುವ ಪ್ರಯೋಗಾಲಯ ಮತ್ತು ಸಂಶೋಧನಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೊಸ ಸಂಶೋಧನಾ ಸಾಧ್ಯತೆಗಳನ್ನು ಅನ್ವೇಷಿಸಬೇಕು. ಇಂತಹ ಪ್ರಯತ್ನಗಳಿಂದ ದೇಶೀಯ ಹಾಗೂ ಜಾಗತಿಕ ಮಟ್ಟದಲ್ಲಿ ಸಂಶೋಧನಾ ಸಹಯೋಗವನ್ನು ಮತ್ತಷ್ಟು ವಿಸ್ತರಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಬಯೋಫೀಡ್‌ಬ್ಯಾಕ್ ಮತ್ತು ಅರಿವಿನ ನರಮನೋವಿಜ್ಞಾನ ಪ್ರಯೋಗಾಲಯದ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಪ್ರಯೋಗಾಲಯದ ಸೌಲಭ್ಯಗಳು, ಸಂಶೋಧನಾ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಉಪಕ್ರಮಗಳ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಈ ವೆಬ್‌ಸೈಟ್ ದೇಶ-ವಿದೇಶಗಳ ಸಂಶೋಧಕರು ಮತ್ತು ಸಂಸ್ಥೆಗಳೊಂದಿಗೆ ಸಂಶೋಧನಾ ಸಹಯೋಗ ಬೆಳೆಸಲು ಪ್ರಮುಖ ವೇದಿಕೆಯಾಗಲಿದೆ ಎಂದು ತಿಳಿಸಲಾಯಿತು.
ಏರೋಬ್ ಪ್ರೈವೇಟ್ ಲಿಮಿಟೆಡ್‌ನ ಸಹಾಯಕ ತಾಂತ್ರಿಕ ಬೆಂಬಲ ವ್ಯವಸ್ಥಾಪಕ ರಾಹುಲ್ ಗುಪ್ತಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಇಇಜಿ ಪರೀಕ್ಷೆಯಲ್ಲಿ ಎಲೆಕ್ಟ್ರೋಡ್ ಅಳವಡಿಕೆ, ಸಿಗ್ನಲ್ ದಾಖಲಾತಿ, ದತ್ತಾಂಶ ಸಂಗ್ರಹಣೆ ಹಾಗೂ ಆರ್ಟಿಫ್ಯಾಕ್ಟ್ ಗುರುತಿಸುವಿಕೆ ಸೇರಿದಂತೆ ವಿವಿಧ ಪ್ರಾಯೋಗಿಕ ವಿಧಾನಗಳ ಕುರಿತು ತರಬೇತಿ ನೀಡಿದರು.
ಇದರೊಂದಿಗೆ ಗಾಲ್ವನಿಕ್ ಸ್ಕಿನ್ ರೆಸ್ಪಾನ್ಸ್ (ಜಿಎಸ್‌ಆರ್), ಹೃದಯ ಬಡಿತದ ವ್ಯತ್ಯಾಸ (ಎಚ್‌ಆರ್‌ವಿ) ಹಾಗೂ ಎಲೆಕ್ಟ್ರೋಮ್ಯೋಗ್ರಫಿ (ಇಎಂಜಿ) ಸೇರಿದಂತೆ ವಿವಿಧ ಶಾರೀರಿಕ ಮಾಪನ ವಿಧಾನಗಳ ಬಗ್ಗೆಯೂ ಭಾಗವಹಿಸಿದವರಿಗೆ ಪ್ರಾಯೋಗಿಕ ಮಾಹಿತಿ ನೀಡಲಾಯಿತು.
ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ವಿಜಯೇಂದ್ರ ಪಾಂಡೆ ಸ್ವಾಗತಿಸಿ, ಪ್ರಾಯೋಗಿಕ ಮತ್ತು ಸಂಶೋಧನಾ ಆಧಾರಿತ ತರಬೇತಿಯನ್ನು ಬಲಪಡಿಸಲು ವಿಭಾಗ ಕೈಗೊಂಡಿರುವ ಉಪಕ್ರಮಗಳ ಕುರಿತು ವಿವರಿಸಿದರು. ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನ ಶಾಲೆಯ ಡೀನ್ ಪ್ರೊ. ಪವಿತ್ರಾ ಆರ್. ಆಲೂರ್ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಆಸ್ತಾ ವಂದಿಸಿದರು.






