Kalaburagi | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ಇಂಡಿಯಾ ಒಕ್ಕೂಟದಿಂದ ಪ್ರತಿಭಟನೆ
99.32 ಲಕ್ಷ ಮತದಾರರ ಹೆಸರು ಮರುಸೇರ್ಪಡೆಗೆ ಒತ್ತಾಯ; ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹ

ಕಲಬುರಗಿ : ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಿ, ಮತದಾನದ ಹಕ್ಕಿನಿಂದ ವಂಚಿತರಾಗಿರುವ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗೆ ಮರುಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಇಂಡಿಯಾ ಒಕ್ಕೂಟದ ವತಿಯಿಂದ ಗುರುವಾರ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಎಸ್‌ಐಆರ್ ಪ್ರಕ್ರಿಯೆಯ ಮೂಲಕ ದೇಶದ ಕೋಟ್ಯಂತರ ಅರ್ಹ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸುವ ಷಡ್ಯಂತ್ರ ನಡೆಯುತ್ತಿದೆ. ಫಾರಂ-7ರ ದುರ್ಬಳಕೆ ಮೂಲಕ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ. ರಾಜ್ಯದ 99.32 ಲಕ್ಷಕ್ಕೂ ಅಧಿಕ ಹಾಗೂ ದೇಶದ 14 ಕೋಟಿಗೂ ಹೆಚ್ಚು ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಚುನಾವಣಾ ಆಯೋಗದ ಲೋಪದಿಂದ ಮತದಾರರ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರಿಗೆ ಮತ್ತೆ ಫಾರಂ-6 ಸಲ್ಲಿಸುವಂತೆ ಸೂಚಿಸುತ್ತಿರುವುದು ಕಾನೂನುಬಾಹಿರವಾಗಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದವರನ್ನೇ ಹೊಸ ಮತದಾರರಂತೆ ಅರ್ಜಿ ಸಲ್ಲಿಸುವಂತೆ ಒತ್ತಾಯಿಸುವ ಮೂಲಕ ಆಯೋಗ ಮತದಾರರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕಾಗಿದೆ. ಆದರೆ, ದೆಹಲಿಯಲ್ಲಿ ಪ್ರತಿಭಟನಾಕಾರರಿಗೆ ನಿರ್ಬಂಧ ವಿಧಿಸಿ, ಪೊಲೀಸರು ಹಾಗೂ ಅರೆಸೈನಿಕ ಪಡೆಗಳನ್ನು ನಿಯೋಜಿಸುವ ಮೂಲಕ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಹೋರಾಟಗಾರರ ಬಂಧನ ಮತ್ತು ದಮನಕಾರಿ ಕ್ರಮಗಳು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಬಿಂಬಿಸುತ್ತಿವೆ ಎಂದು ಟೀಕಿಸಿದರು.
ಏಕಪಕ್ಷೀಯವಾಗಿ ಎಸ್‌ಐಆರ್ ಪ್ರಕ್ರಿಯೆ ಜಾರಿಗೊಳಿಸಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಹಕ್ಕೊತ್ತಾಯಗಳು: ದೆಹಲಿ ಪೊಲೀಸರ ಕಿರುಕುಳ ಮತ್ತು ಬೇಕಾಬಿಟ್ಟಿ ಬಂಧನಗಳನ್ನು ತಕ್ಷಣ ನಿಲ್ಲಿಸಬೇಕು. ಕಲಬುರಗಿ ಜಿಲ್ಲೆಯ 4.77 ಲಕ್ಷ ಸೇರಿದಂತೆ ರಾಜ್ಯದ 99.32 ಲಕ್ಷ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಮರುಸೇರ್ಪಡೆಗೊಳಿಸಬೇಕು. ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಫಾರಂ-7 ದುರ್ಬಳಕೆ ಮಾಡಿದವರ ಹಾಗೂ ಅದಕ್ಕೆ ಪ್ರೇರಣೆ ನೀಡಿದ ಬಿಜೆಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬೇಡಿಕೆಗಳು ಈಡೇರದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಕಿರಣ ದೇಶಮುಖ, ಎಂಎಲ್‌ಸಿ ಜಗದೇವ ಗುತ್ತೇದಾರ, ಮಾಜಿ ಸಚಿವ ರೇವೂನಾಯಕ್ ಬೆಳಮಗಿ, ಇಂಡಿಯಾ ಒಕ್ಕೂಟದ ಮುಖಂಡರಾದ ಮಹೇಶಕುಮಾರ ರಾಠೋಡ, ಮಜರ್ ಅಲಂಖಾನ್, ಪ್ರವೀಣ ಪಾಟೀಲ ಹರವಾಳ, ಶಕೀಲ್ ಸರಡಗಿ, ಲಿಂಗರಾಜ ತಾರಫೈಲ್, ಶ್ಯಾಮ್ ನಾಟೀಕಾರ, ಮೌಲಾ ಮುಲ್ಲಾ, ಭೀಮಣ್ಣ ಸಾಲಿ, ಲವಿತ್ರ ವಸ್ತ್ರದ, ಭೀಮಾಶಂಕರ ಮಾಡಿಯಾಳ, ಪವನಕುಮಾರ ವಳಕೇರಿ, ಪರಶುರಾಮ ನಾಟೇಕಾರ, ಚಂದ್ರಶೇಖರ ಹಡಪದ ತೋನಸನಹಳ್ಳಿ, ಮಂಜು ಸಿ.ಕೆ. ಕಮಲಾಪೂರ, ಧರ್ಮರಾಜ ಹೇರೂರ, ಟೈಗರ್ ವಿಘನೇಶ, ಮಲ್ಲಿಕಾರ್ಜುನ ನಿಲೂರೆ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.






