ಕಲಬುರಗಿ | ಕಲ್ಯಾಣ ಕರ್ನಾಟಕದ ನೇಮಕಾತಿ, ಬಡ್ತಿಯಲ್ಲಿ ಅನ್ಯಾಯ: ಸದನದಲ್ಲಿ ಶಶೀಲ್ ನಮೋಶಿ ಧ್ವನಿ

ಕಲಬುರಗಿ: ರಾಜ್ಯದಲ್ಲಿ ನೇಮಕಾತಿ ಪ್ರಾಧಿಕಾರಗಳು ವಿಭಿನ್ನ ನಿಯಮಗಳ ಮುಖಾಂತರ ನೇಮಕಾತಿ ಮಾಡುತ್ತಿರುವುದರಿಂದ ಕಲ್ಯಾಣ ಕರ್ನಾಟಕದ ಭಾಗದ 371(ಜೆ) ಅಭ್ಯರ್ಥಿಗಳಿಗೆ ನೇಮಕಾತಿ ಹಾಗೂ ಬಡ್ತಿ ಯಲ್ಲಿ ಭಾರೀ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಇಂದು ಸದನದಲ್ಲಿ ಮುಖ್ಯಮಂತ್ರಿಗಳಿಗೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸಂವಿಧಾನ ವಿಶೇಷ ವಿಧಿ 371 (ಜೆ)ಬಂದ ನಂತರ ಈ ಭಾಗದ ನೇಮಕಾತಿ ಹಾಗೂ ಬಡ್ತಿ ವಿಷಯಕ್ಕೆ ಸಂಬಂಧಿಸಿದಂತೆ 2016 ರಿಂದ 2025 ರ ವರೆಗೆ ಅನೇಕ ಸುತ್ತೋಲೆಗಳನ್ನು ಸರ್ಕಾರ ಹೊರಡಿಸಿದೆ. ಈ ಎಲ್ಲ ಸುತ್ತೋಲೆಗಳಿಂದ ಗೊಂದಲವುಂಟಾಗಿ ಬೇರೆ ಬೇರೆ ನೇಮಕಾತಿ ಪ್ರಾಧಿಕಾರಗಳು ವಿಭಿನ್ನ ರೀತಿಯಲ್ಲಿ ನೇಮಕಾತಿ ಮಾಡಿಕೊಂಡಿದ್ದರಿಂದ ನಮ್ಮ ಭಾಗದ ಯುವಕರಿಗೆ ಭಾರಿ ಅನ್ಯಾಯವಾಗುತ್ತಿದೆ. ಆದ್ದರಿಂದ ಈ ಅನ್ಯಾಯವನ್ನು ತಡೆಯಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಇತ್ತಿಚೆಗೆ 2025ರ ಜೂ.3ರಂದು ಮತ್ತೊಂದು ಆದೇಶ ಹೊರಡಿಸಿದ್ದು, ಈ ಆದೇಶವು ಸಹ ಬಹಳಷ್ಟು ಗೊಂದಲಮಯವಾಗಿದೆ. ಸ್ಥಳೀಯ ವೃಂದ ಹಾಗೂ ಮೂಲ ವೃಂದ ಮಾಡಿ ಅದರಲ್ಲಿ ಕಂಪಾರ್ಟ್‌ಮೆಂಟ್ ಮಾಡಿದ್ದು, ಅವೈಜ್ಞಾನಿಕವಾಗಿದೆ. ಇದನ್ನು ಸರಿಪಡಿಸಬೇಕು, ಎಸ್ಸಿ ಎಸ್ಟಿ ಮೀಸಲಾತಿಯನ್ನು ಹೇಗೆ ಪರಿಗಣಿಸುತ್ತೇವೆಯೋ ಅದೇ ರೀತಿ ಕಲ್ಯಾಣ ಕರ್ನಾಟಕ ಮೀಸಲಾತಿಯನ್ನು ನೇಮಕಾತಿ ಹಾಗೂ ಬಡ್ತಿ ಯಲ್ಲಿ ಪರಿಗಣಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಅವರು, ಕಲ್ಯಾಣ ಕರ್ನಾಟಕ ಭಾಗದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿ ಕುರಿತು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಅವರು ಅದೇ ಭಾಗದವರಾಗಿರುವರಿಂದ ಅವರು ಸರಿ ಮಾಡುವ ವಿಶ್ವಾಸವಿದೆ, ಆ ಆದೇಶದ ಬಗ್ಗೆ ಗೊಂದಲವಿದ್ದರೆ ಅದನ್ನು ಸರಿಪಡಿಸುವ ಕೆಲಸ ಖಂಡಿತ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಕಾನೂನು ನೀಡಿದ್ದು, ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕದ ನೇಮಕಾತಿ ಹಾಗೂ ಬಡ್ತಿ ಎಂದು ಅನ್ಯಾಯವಾಗಲು ಬಿಡುವುದಿಲ್ಲ, ಎಂದ ಅವರು, ನಮೋಶಿಯವರ ಸಲಹೆಯನ್ನು ನಾನು ಪರಿಗಣಿಸುತ್ತೇವೆ ಎಂದು ತಿಳಿಸಿದರು.







