ಕಲಬುರಗಿ| ಜಿಮ್ಸ್ ಆಸ್ಪತ್ರೆಯಲ್ಲಿ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಿಂದ ತಪಾಸಣೆ

ಕಲಬುರಗಿ: ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಅವರು ಆಯೋಗದ ಸದಸ್ಯರೊಂದಿಗೆ ಶುಕ್ರವಾರ ಮಧ್ಯಾಹ್ನ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಒಳ ರೋಗಿಗಳಿಗೆ ನಿಯಮಿತವಾಗಿ ಮೊಟ್ಟೆ, ಕಾಫಿ-ಚಹಾ ಕೊಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ಲೇಬರ್, ಅಡುಗೆ ಕೋಣೆ, ಡೈನಿಂಗ್ ಹಾಲ್, ಮಹಿಳಾ ಲೇಬರ್ ವಾರ್ಡ್, ಓ.ಟಿ, ಐ.ಸಿ.ಯು, ಎನ್.ಆರ್.ಸಿ.ಯು ವಿಭಾಗಕ್ಕೆ ಭೇಟಿ ನೀಡಿದ ಅವರು, ಒಳ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ನೀಡಲಾಗುತ್ತಿರುವ ಊಟೋಪಚಾರದ ಕುರಿತು ಆಸ್ಪತ್ರೆಯ ನಿರ್ದೆಶಕರು ಮತ್ತು ಇತರ ಸಿಬ್ಬಂದಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಜಿಮ್ಸ್ ನಿರ್ದೇಶಕಿ ಡಾ.ಉಮೇಶ್ ಎಸ್.ಆರ್., ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ., ಜಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರು ಡಾ.ಅಸ್ನಾ ರುಕಿಯಾ ರಬಾ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮುನಾವರ ದೌಲಾ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.







