Kalaburagi | ಯುವಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಡಾ.ಮುಹಮ್ಮದ್ ಅಸ್ಗರ್ ಚುಲ್ಬುಲ್

ಕಲಬುರಗಿ: ಇಸ್ಲಾಂ ವಿರೋಧಿ ಅಪಪ್ರಚಾರ ಹಾಗೂ ಪ್ರವಾದಿ ನಿಂದನೆಗಳನ್ನು ಎದುರಿಸಲು ಯುವಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸೀರತ್ ಉನ್ನಬಿ ಸ್ಪರ್ಧೆಗಳ ಸಮಿತಿ ಅಧ್ಯಕ್ಷ ಡಾ.ಮುಹಮ್ಮದ್ ಅಸ್ಗರ್ ಚುಲ್ಬುಲ್ ಹೇಳಿದರು.
ನಗರದ ಸಂಗತ್ರಾಶ್ವಾಡಿಯ ಗುಲ್ಶನ್ ಅತ್ಫಾಲ್ ಉರ್ದು ಮತ್ತು ಹ್ಯೂಮನ್ ಏಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೇಂದ್ರ ಸೀರತ್ ಸಮಿತಿ, ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ಹಾಗೂ ಸೀರತ್ ಉನ್ನಬಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹದೀಸ್, ಕುರಾನ್ ಹಾಗೂ ಸೀರತ್ ಕ್ವಿಜ್ ಸ್ಪರ್ಧೆಗಳು ನಡೆದವು.
ಕಳೆದ ಎಂಟು ವರ್ಷಗಳಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಇವುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಜ್ಞಾನ ಹಾಗೂ ಪ್ರವಾದಿಯವರ ಮೇಲಿನ ಪ್ರೀತಿಯನ್ನು ಬೆಳೆಸಲಾಗುತ್ತಿದೆ. ಈ ಬಾರಿ ಸೀರತ್ ಕ್ವಿಜ್ನಲ್ಲಿ ಒಂದು ಸಾವಿರಕ್ಕೂ ಅಧಿಕ, ಕುರಾನ್ ಕ್ವಿಜ್ನಲ್ಲಿ 767 ಹಾಗೂ ಹದೀಸ್ ಕ್ವಿಜ್ನಲ್ಲಿ 300 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭ ಡಿಸೆಂಬರ್ನಲ್ಲಿ ನಡೆಯಲಿದ್ದು, ವಿಜೇತರು ಸೇರಿದಂತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ಹಾಗೂ ಉಡುಗೊರೆಗಳನ್ನು ನೀಡಲಾಗುವುದು ಎಂದು ಡಾ.ಮುಹಮ್ಮದ್ ಅಸ್ಗರ್ ಚುಲ್ಬುಲ್ ತಿಳಿಸಿದರು.






