Kalaburagi | ‘ಭೂ ಗ್ಯಾರಂಟಿ’ ಯೋಜನೆಯಡಿ ಇ-ಸ್ವತ್ತು ನೋಂದಣಿಗೆ ಅಗತ್ಯ ದಾಖಲೆ ಸಲ್ಲಿಸಲು ಸೂಚನೆ

ಕಲಬುರಗಿ : ‘ಭೂ ಗ್ಯಾರಂಟಿ’ ಯೋಜನೆಯಡಿ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ಮಾಡಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಒದಗಿಸಿ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ತಿಳಿಸಿದ್ದಾರೆ.
ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ಮಾಡಿಸಲು ಸಾರ್ವಜನಿಕರು 2025ರ ಏಪ್ರಿಲ್ 7ಕ್ಕಿಂತ ಹಿಂದಿನ ವಿದ್ಯುತ್ ಬಿಲ್, ಆಸ್ತಿ ಮಾಲೀಕರ ಆಧಾರ್ ಕಾರ್ಡ್ ಪ್ರತಿ ಹಾಗೂ ಇ-ಕೆವೈಸಿ ಪರಿಶೀಲನೆಗಾಗಿ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕು. ಇದರೊಂದಿಗೆ ಆಸ್ತಿಯ ಇತ್ತೀಚಿನ ಛಾಯಾಚಿತ್ರವನ್ನೂ ನೀಡಬೇಕು.
ಪ್ರಸ್ತುತ ಆಸ್ತಿ ದಾಖಲೆ (ಪಿ2)ಯಲ್ಲಿ ತಂದೆಯ ಹೆಸರು ಇದ್ದು, ಅವರ ಮಗ ಅಥವಾ ಮಗಳು ವಾರಸುದಾರಿಕೆಯ ಆಧಾರದ ಮೇಲೆ ಇ-ಖಾತೆಗಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಂದೆಯ ಮರಣ ಪ್ರಮಾಣಪತ್ರ ಹಾಗೂ ವಾರಸುದಾರಿಕೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆ ಬಾಗಿಲಿಗೆ ಭೇಟಿ ನೀಡುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿಗದಿತ ದಾಖಲೆಗಳನ್ನು ನೀಡಿ ಸಹಕರಿಸಬೇಕು ಎಂದು ರಾಹುಲ್ ಶರಣಪ್ಪ ಸಂಕನೂರ ಮನವಿ ಮಾಡಿದ್ದಾರೆ.






