ನಾಡ ಕಚೇರಿಯಿಂದ ತ್ವರಿತ ಸೇವೆ ನೀಡುವಲ್ಲಿ ರಾಜ್ಯದಲ್ಲಿಯೇ ಕಲಬುರಗಿ ನಂ.1

ಕಲಬುರಗಿ: ಅಟಲ್‌ಜೀ ಜನಸ್ನೇಹಿ ಕೇಂದ್ರದ ಮೂಲಕ ಜುಲೈ-2025ರ ಮಾಹೆಯಲ್ಲಿ ಸ್ವೀಕರಿಸಲಾಗಿರುವ 58,647 ಅರ್ಜಿಗಳಲ್ಲಿ 55,981 ಅರ್ಜಿಗಳನ್ನು ಕಾಲಮಿತಿಯಲ್ಲಿಯೇ ವಿಲೇವಾರಿ ಮಾಡಿ ಶೇ.96 ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಅರ್ಜಿ ವಿಲೇವಾರಿ ಕಲಬುರಗಿ ನಂಬರ್-1 ಸ್ಥಾನ ಪಡೆದಿದೆ.
ನಾಡ ಕಚೇರಿಯಿಂದ ಕಂದಾಯ ಇಲಾಖೆಯ 41 ಸೇವೆ ನೀಡಲು ಜುಲೈ-2025ರ ಮಾಹೆಯಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗಧಿತ ಅವಧಿಯಲ್ಲಿ 8.93 ವಿಲೇವಾರಿ ಸೂಚ್ಯಂಕದ ಪ್ರಕಾರ ವಿಲೇವಾರಿ ಮಾಡುವ ಮೂಲಕ ಕಲಬುರಗಿ ರಾಜ್ಯದ ಗಮನ ಸೆಳೆದಿದೆ.
ಜಿಲ್ಲೆಯಲ್ಲಿನ ಈ ಕಾರ್ಯ ಸಾಧನೆಗೆ ನಾಡ ಕಛೇರಿ ಮತ್ತು ಆಟಲ್‌ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಗಳ ಸಹಕಾರ, ಕಾರ್ಯತತ್ಪರತೆ ಕಾರಣವಾಗಿರುತ್ತದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿರುವ ಡಿ.ಸಿ ಬಿ.ಫೌಝಿಯಾ ತರನ್ನುಮ್ ಅವರು, ಮುಂದಿನ ದಿನಗಳಲ್ಲಿ ಇದೇ ರೀತಿಯ ಸಾಧನೆ ಮಾಡುವಂತೆ ಸಿಬ್ಬಂದಿಗಳನ್ನು ಹುರಿದುಂಬಿಸಿದ್ದಾರೆ.
ಟಾಪ್ 10ನಲ್ಲಿ ಕಲ್ಯಾಣದ 5 ಜಿಲ್ಲೆಗಳು:
ಇನ್ನು ಜಿಲ್ಲಾವಾರು ಅರ್ಜಿ ವಿಲೇವಾರಿ ಪಟ್ಟಿ ವೀಕ್ಷಿಸಿದಾಗ ಅಗ್ರ ಮೂರು ಕ್ರಮಾಂಕಗಳು ಕಲಬುರಗಿ, ವಿಜಯನಗರ, ರಾಯಚೂರು ಸ್ಥಾನ ಪಡೆದುಕೊಂಡಿವೆ. ಉಳಿದಂತೆ 6ನೇ ಮತ್ತು 9ನೇ ಕ್ರಮಾಂಕದಲ್ಲಿ ಕ್ರಮವಾಗಿ ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆ ಸ್ಥಾನ ಗಳಿಸಿದ್ದು, ಒಟ್ಟಾರೆಯಾಗಿ ಕಲ್ಯಾಣದ 5 ಜಿಲ್ಲೆಗಳು ಟಾಪ್ 10ನಲ್ಲಿ ಇರುವ ಮೂಲಕ ಸಾರ್ವಜನಿಕರಿಗೆ ಸೇವೆಗೆ ತ್ವರಿತವಾಗಿ ಸ್ಪಂದಿಸಲಾಗುತ್ತಿದೆ.







