Kalaburagi | ಫೆಲೆಸ್ತೀನ್‌ನಲ್ಲಿ ಇಸ್ರೇಲ್ ದೌರ್ಜನ್ಯದ ಪರಮಾವಧಿ : ಡಾ.ಅಸ್ಗರ್ ಚುಲಬುಲ್

ಕಲಬುರಗಿ: ಇಸ್ರೇಲ್ ಕ್ರಮಗಳು ಫೆಲೆಸ್ತೀನ್ ಪ್ರದೇಶದಲ್ಲಿ ದೌರ್ಜನ್ಯದ ಪರಮಾವಧಿಯನ್ನು ತಲುಪಿವೆ. ಈ ಕುರಿತು ಮುಸ್ಲಿಂ ರಾಷ್ಟ್ರಗಳ ಮೌನ ದುರದೃಷ್ಟಕರವಾಗಿದೆ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ರಾಷ್ಟ್ರೀಯ ಕಾರ್ಯದರ್ಶಿ ಡಾ.ಮುಹಮ್ಮದ್ ಅಸ್ಗರ್ ಚುಲಬುಲ್ ಆತಂಕ ವ್ಯಕ್ತಪಡಿಸಿದರು.
ನಗರದ ಪಡಾ ಅಲ್ಲಾ ಕಾಲೋನಿಯ ಮಸೀದಿ ಉಮರ್ ಫಾರೂಕ್‌ನಲ್ಲಿ ನಡೆದ ‘ಯೌಮ್-ಅಲ್-ಖುದ್ಸ್’ ಸಭೆಯಲ್ಲಿ ಅವರು ಮಾತನಾಡಿದರು.
ಪವಿತ್ರ ರಮಝಾನ್ ತಿಂಗಳಲ್ಲಿ ಅಲ್-ಅಕ್ಸಾ ಮಸೀದಿ ಮುಚ್ಚಲ್ಪಟ್ಟಿರುವುದನ್ನು ಉಲ್ಲೇಖಿಸಿ, ಈ ವಿಷಯದಲ್ಲಿ ಮುಸ್ಲಿಂ ರಾಷ್ಟ್ರಗಳು ಯಾವುದೇ ದೃಢ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಹೇಳಿದರು. ಇಸ್ರೇಲ್ ಮತ್ತು ಅಮೆರಿಕದ ಭಯದಿಂದ ಈ ಮೌನ ಉಂಟಾಗಿದೆ ಎಂದು ಆರೋಪಿಸಿದರು.
ಇಸ್ರೇಲ್ ಮೊದಲಿಗೆ ಜೆರುಸಲೆಂ ಸುತ್ತ ಅಕ್ರಮ ವಸಾಹತುಗಳನ್ನು ನಿರ್ಮಿಸಿ, ನಂತರ ಗಾಝಾ ಪ್ರದೇಶವನ್ನು ಹಾನಿಗೊಳಪಡಿಸಿದೆ. ಇದೀಗ ಅಲ್-ಅಕ್ಸಾ ಮಸೀದಿಯನ್ನು ಕೆಡವಿ ‘ಹೈಕಲ್-ಎ-ಸುಲೈಮಾನಿ’ ನಿರ್ಮಿಸಲು ಸಂಚು ರೂಪಿಸಿದೆ ಎಂದು ದೂರಿದರು.
‘ಅಬ್ರಹಾಂ ಒಪ್ಪಂದ’ವನ್ನು ಟೀಕಿಸಿದ ಅವರು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮೆಚ್ಚಿಸಲು ಈಜಿಪ್ಟ್, ಜೋರ್ಡಾನ್ ಹಾಗೂ ಯುಎಇ ದೇಶಗಳು ಸಹಿ ಹಾಕಿದ ಕ್ರಮವನ್ನು ಖಂಡಿಸಿದರು.
ವಿಶ್ವಸಂಸ್ಥೆ ತಕ್ಷಣ ಫೆಲೆಸ್ತೀನ್ ಅನ್ನು ಸ್ವತಂತ್ರ ರಾಷ್ಟ್ರವಾಗಿ ಘೋಷಿಸಿ, ಜೆರುಸಲೆಂ ಮತ್ತು ಗಾಝಾದ ಮೇಲಿನ ಕಬಳಿಕೆಯನ್ನು ಅಂತ್ಯಗೊಳಿಸಲು ಇಸ್ರೇಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಮೌಲಾನಾ ಫಕ್ರುದ್ದೀನ್ ಮಾನ್ಯಾಲ್ ಮಾತನಾಡಿ, ಅಲ್-ಅಕ್ಸಾ ಮಸೀದಿಯ ಪವಿತ್ರತೆಯನ್ನು ಉಳಿಸಲು ಮುಸ್ಲಿಂ ಸಮುದಾಯವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂದು ಕರೆ ನೀಡಿದರು.
ಮೌಲಾನಾ ಶೇಖ್ ಸಲೀಮುದ್ದೀನ್ ನಿಝಾಮಿ, ಅಡ್ವೊಕೇಟ್ ಅಬ್ದುಲ್ ಜಬ್ಬಾರ್ ಗೋಲಾ, ಮೌಲಾನಾ ಯೂಸುಫ್ ಖುರೇಷಿ, ಅಫ್ಜಲ್ ಮಹಮೂದ್ ಸೇರಿದಂತೆ ಹಲವರು ಮಾತನಾಡಿದರು.
ಕಾರ್ಯಕ್ರಮವು ಖಾರಿ ಸಿದ್ದಿಕ್ ಹುಸೇನ್ ಅವರ ಕುರಾನ್ ಪಠಣದಿಂದ ಆರಂಭವಾಗಿ, ಮುಹಮ್ಮದ್ ಅಫಾನ್ ಅವರ ನಾತ್ ಗಾಯನದೊಂದಿಗೆ ಮುಂದುವರಿಯಿತು. ವೇದಿಕೆಯಲ್ಲಿ ಸೈಯದ್ ಮಕ್ಬೂಲ್ ಅಹ್ಮದ್, ಖ್ವಾಜಾ ಪಾಷಾ ಇನಾಮದಾರ್, ಮುಹಮ್ಮದ್ ಆರೀಫ್, ಯೂನಿಸ್ ಅಹ್ಮದ್ ಶಾಹಿದ್ರಿ, ಪ್ರೊ. ಅಬ್ದುಲ್ ಬಾರಿ, ಮನ್ಸೂರ್ ಜುನೈದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.






