ಕಲಬುರಗಿ | ವಕ್ಫ್ ಆಸ್ತಿಯನ್ನು ಉಮೀದ್ ಪೋರ್ಟಲ್‌ನಲ್ಲಿ ಡಿ.5ರೊಳಗೆ ನೋಂದಣಿ ಮಾಡಿಸುವುದು ಕಡ್ಡಾಯ : ಸೈಯದ್ ಅಲಿ ಅಲ್ ಹುಸೈನಿ

ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ವಕ್ಫ್ ಆಸ್ತಿಯನ್ನು ಹೊಂದಿದ್ದೇವೆ. ಎಲ್ಲಾ ಆಸ್ತಿಯನ್ನು ಉಮೀದ್ ಪೋರ್ಟಲ್ ನಲ್ಲಿ ಡಿ.5ರೊಳಗೆ ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ದಿನಾಂಕ ವಿಸ್ತರಿಸುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅದಕ್ಕಾಗಿ ಈ ಯೋಜನೆಯನ್ನು ರಾಜ್ಯ ವಕ್ಫ್ ಮಂಡಳಿ ಪೈಲಟ್ ಪ್ರಾಜೆಕ್ಟ್ ಎಂದು ಪರಿಗಣಿಸಿದೆ ಎಂದು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ತಿಳಿಸಿದರು.
ಕೆಬಿಎನ್ ವಿಶ್ವ ವಿದ್ಯಾಲಯದಲ್ಲಿರುವ ಕಂಪ್ಯೂಟರ್ ಲ್ಯಾಬ್ ಉಮೀದ್ ಪೋರ್ಟಲ್ ಮೀಸಲಿಟ್ಟಿರುವ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ, ಮಾತನಾಡಿದ ಅವರು, ನೋಂದಣಿ ವೇಳೆ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಅವೆಲ್ಲವೂ ಇತ್ಯರ್ಥಪಡಿಸಿ ನಿಗದಿತ ಸಮಯದಲ್ಲಿ ಎಲ್ಲಾ ಆಸ್ತಿಯನ್ನು ಉಮೀದ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕಾಗಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ ಶೇ.30ರಷ್ಟು ಆಸ್ತಿಗಳು ನೋಂದಣಿ ಆಗಿವೆ. ಎಲ್ಲಾ ಜಿಲ್ಲೆಗಳ ವಕ್ಫ್ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ನೋಂದಣಿ ಕೆಲಸ ಮಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ವಕ್ಫ್ ಆಸ್ತಿಯನ್ನು ಹೊಂದಿದ್ದು, 2 ಸಾವಿರ ಆಸ್ತಿಯ ಕುರಿತು ಅಪ್ಲೋಡ್ ಆಗಿವೆ ಎಂದು ಮಾಹಿತಿ ನೀಡಿದರು.
ನೋಂದಣಿ, ಪರಿಶೀಲನೆ ಮತ್ತು ಅನುಮೋದನೆ ಹೀಗೆ ಮೂರು ಹಂತದಲ್ಲಿ ಉಮೀದ್ ಪೋರ್ಟಲ್ ನಲ್ಲಿ ಕೆಲಸ ಮಾಡಬೇಕಾಗಿದೆ. ಸದ್ಯ ಮೆಕರ್ (ನೋಂದಣಿ ಪ್ರಕ್ರಿಯೆ) ಮಾತ್ರ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ಅಬ್ದುಲ್ ಮನಾನ್, ಕೆಬಿಎನ್ ವಿಶ್ವ ವಿದ್ಯಾಲಯದ ನಿರ್ದೇಶಕರಾದ ಸೈಯದ್ ಮುಸ್ತಫಾ ಬಾಬಾ, ಉಪ ಕುಲಪತಿ ಪ್ರೊ.ಅಲಿ ರಾಜ ಮುಜ್ವಿ, ಕುಲಸಚಿವ ವಿಲಾಯತ್ ಅಲಿ, ಮೊಹಮ್ಮದ್ ಅಶಫಾಕ್, ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕ ಹಜರತ್ ಅಲಿ ನದಾಫ್, ಡಾ. ಅಜಗರ್ ಚುಲಬುಲ್ ಮತ್ತು ಜಿಲ್ಲಾ ವಕ್ಫ್ ಸಿಬ್ಬಂದಿಗಳು ಸೇರಿದಂತೆ ಹಲವರು ಇದ್ದರು.







