ಕಲಬುರಗಿ | ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಅಗತ್ಯ : ಡಾ.ಸುಜಾತಾ ಜಂಗಮಶೆಟ್ಟಿ
ಶಿಶಿರೋತ್ಸವ ಸಂಭ್ರಮ-2025ಕ್ಕೆ ಚಾಲನೆ

ಕಲಬುರಗಿ : ಅಧುನಿಕ ಒತ್ತಡದ ಜೀವನದಲ್ಲಿ ಮಕ್ಕಳು ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಅಗತ್ಯವಾಗಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಅಭಿಪ್ರಾಯಪಟ್ಟರು.
ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಅಪ್ಪನೆ ತೆರೆ ನಿರ್ವಹಣಾ ಪ್ರಾಧಿಕಾರದಿಂದ ಗುರುವಾರದಿಂದ ಆರಂಭಗೊಂಡ ಶಿಶಿರೋತ್ಸವ ಸಂಭ್ರಮ-2025ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಗರದ ಪ್ರದೇಶದಲ್ಲಿ ಕಾನ್ವೆಂಟ್ ಶಾಲೆಗೆ ಹೋಗುವ ಮಕ್ಕಳು ಪರೀಕ್ಷೆ ಎದುರಿಸಬೇಕು, ಹೆಚ್ಚು ಅಂಕ ತೆಗೆಯಬೇಕೆಂಬ ಒತ್ತಡದಲ್ಲಿಯೇ ವಿಧ್ಯಾಭ್ಯಾಸ ಮಾಡುತ್ತಾ ವ್ಯಕ್ತಿ ವಿಕಸನದ ಕಡೆ ಮತ್ತು ಪಠ್ಯೇತರ ಚಟುವಟಿಕೆ ಕಡೆ ಹೆಚ್ಚು ಸಮಯ ನೀಡಲ್ಲ. ಇದರಿಂದ ಖಿನ್ನತೆಗೆ ಒಳಗಾಗುತ್ತಾರೆ. ಈ ಒತ್ತಡದಿಂದ ಹೊರಬರಲು ಸಂಸ್ಕೃತಿಕ ಆಸಕ್ತಿ ತುಂಬಾ ಮುಖ್ಯ ಎಂದರು.
ಗಮನ ಸೆಳೆದ ರಂಗೋಲಿ ಚಿತ್ತಾರ :
ಕಾರ್ಯಕ್ರಮ ಉದ್ಘಾಟನಾ ಮುನ್ನ ಸಂಗಮೇಶ್ವರ ಮಹಿಳಾ ಮಂಡಲದ ಅಧ್ಯಕ್ಷೆ ವೈಶಾಲಿ ದೇಶಮುಖ್ ಹಾಗೂ ಸಂಧ್ಯಾ ಹೊನಗುಂಟಿಕರ್ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಮಹಿಳೆಯರು ಕೆರೆಯ ಉದ್ಯಾನವನದಲ್ಲಿ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿದ್ದು, ಸಭಿಕರ ಗಮನ ಸೆಳೆಯಿತು.
ಸಹಾಯಕ ಆಯುಕ್ತೆ ಸಾಹಿತ್ಯ ಅವರು ಸಸಿಗೆ ನೀರೆರೆಯುವ ಮೂಲಕ ಶಶಿರೋತ್ಸವ ಸಂಭ್ರಮ-2025 ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಇದ್ದರು. ಪ್ರಾದೇಶಿಕ ಆಯುಕ್ತರ ಕಚೇರಿಯ ತಹಶೀಲ್ದಾರ್ ವೆಂಕಣ್ಣ ಗೌಡ ಸ್ವಾಗತಿಸಿದರು. ಶಶೀಕಲಾ ಜಡೆ ನಿರೂಪಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲಿಗೆ ತಬಲಾ ಕಲಾವಿದ ರವೀಂದ್ರ ಕುಲಕರ್ಣಿ ನೇತೃತ್ವದ ಹಂಸದ್ವನಿ ತಬಲಾ ಬಳಗದಿಂದ ತಬಲಾ ನಿನಾದ ಮೂಡಿಬಂತು. ಡಾ.ಶುಭಾಂಗಿ ನಿರ್ದೇಶನದಲ್ಲಿ ಓಂಕಾರ ನೃತ್ಯ ಸಾಧನಾ ತಂಡದಿಂದ ನೃತ್ಯ ವೈಭವ ಪ್ರದರ್ಶಿಸಿದರು. ಕರ್ನಾಟಕ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಾಬುರಾವ್ ಕೋಬಾಲ್ ಮತ್ತು ಸಂಗಡಿಗರಿಂದ ಜಾನಪದ ಗೀತೆ ಮೂಡಿಬಂದರೆ ಲಕ್ಷ್ಮಿ ಅರುಣ್ ಭೀಮಳ್ಳಿ ಅವರು ತಮ್ಮ ಸುಮಧುರ ಕಂಠದಿಂದ ಗಾಯನ ಪ್ರಸ್ತುತಪಡಿಸಿದರು. ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಾ ರಸಿಕರ ಮನ ತಣಿಸಲು ಯಶಸ್ವಿಯಾದವು.







