Kalaburagi | ಜಯದೇವಿತಾಯಿ ಲಿಗಾಡೆ ಶ್ರೇಷ್ಠ ಜಾನಪದ ವಿದ್ವಾಂಸರು : ಡಾ.ಶಿವರಂಜನ ಸತ್ಯಂಪೇಟೆ

ಕಲಬುರಗಿ: ಕರ್ನಾಟಕ ಏಕೀಕರಣ ಹಾಗೂ ಸೊಲ್ಲಾಪುರವನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜಯದೇವಿತಾಯಿ ಲಿಗಾಡೆ ಅವರು ಶ್ರೇಷ್ಠ ಜಾನಪದ ವಿದ್ವಾಂಸರಾಗಿದ್ದರು ಎಂದು ಪತ್ರಕರ್ತ ಹಾಗೂ ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಕಲಬುರಗಿ ಜಿಲ್ಲಾ ಘಟಕ ಹಾಗೂ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ‘ಹಿರಿಯ ಮಹಿಳಾ ಜಾನಪದ ವಿದ್ವಾಂಸರ ಬದುಕು ಬರಹ ಉಪನ್ಯಾಸ ಮಾಲಿಕೆ-2’ ಕಾರ್ಯಕ್ರಮದಲ್ಲಿ ಜಯದೇವಿತಾಯಿ ಲಿಗಾಡೆ ಅವರ ಬದುಕು ಮತ್ತು ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಆಗಿನ ಕಾಲದಲ್ಲಿ ಸೊಲ್ಲಾಪುರದ ವಾರದ ಮಲ್ಲಪ್ಪನವರ ಕುಟುಂಬದಲ್ಲಿ ಬೆಳೆದು, ಬಸವಕಲ್ಯಾಣದ ಭಕ್ತಿ ಭವನಕ್ಕೆ ಬಂದ ಅವರ ಜೀವನ ಪಯಣ ಅತ್ಯಂತ ರೋಚಕವಾಗಿತ್ತು ಎಂದು ಅವರು ವಿವರಿಸಿದರು.
ಮರಾಠಿ ಮಾತೃಭಾಷೆಯಾಗಿದ್ದರೂ ಕನ್ನಡ ಕಲಿತು ‘ಸಿದ್ಧರಾಮೇಶ್ವರ ಪುರಾಣ’ ಕೃತಿಯನ್ನು ಕನ್ನಡದಲ್ಲಿ ರಚಿಸುವ ಮೂಲಕ ಕನ್ನಡ ಸಾಹಿತ್ಯ ಹಾಗೂ ಜಾನಪದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಜಾನಪದ ಶೈಲಿಯ ತ್ರಿಪದಿಗಳಲ್ಲಿ ಬಸವಣ್ಣ, ಮಹಾತ್ಮ ಗಾಂಧಿ, ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಹಲವು ಮಹನೀಯರ ಕುರಿತು ಹಾಗೂ ಬದುಕಿಗೆ ಅಗತ್ಯವಾದ ಅನೇಕ ಉಪಯುಕ್ತ ವಿಚಾರಗಳಿವೆ ಎಂದು ಸತ್ಯಂಪೇಟೆ ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್. ಕೊಂಡಾ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕರಾದ ಡಾ. ವಿಜಯಕುಮಾರ ಪರೂತೆ ಹಾಗೂ ರೇವಣಸಿದ್ದಪ್ಪ ದುಖಾನ್ ವೇದಿಕೆಯಲ್ಲಿದ್ದರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಕವಿತಾ ಎ.ಎಂ. ನಿರೂಪಿಸಿದರು. ಸೃಷ್ಠಿ ಬಿರಾದಾರ ಪ್ರಾರ್ಥನೆಗೀತೆ ಹಾಡಿದರು. ದಾನಮ್ಮ ಕೋರವಾರ ಸ್ವಾಗತಿಸಿದರು. ಬಸಮ್ಮ ಗೊಬ್ಬುರ ವಂದಿಸಿದರು.
ರೇಣುಕಾ ಹಾಗರಗುಂಡಗಿ, ಡಾ.ಮಹೇಶ ಗಂವ್ಹಾರ, ಶಿವರಾಜ ಪಾಟೀಲ, ಚನ್ನಬಸಪ್ಪ ಅಣಬಿ, ಡಾ.ಪ್ರೇಮಚಂದ್ ಚವ್ಹಾಣ, ಮನೋಹರ ಪೋತ್ದಾರ ಇತರರಿದ್ದರು.






