ಕಲಬುರಗಿ | ಜೇವರ್ಗಿ ಪುರಸಭೆ ಗದ್ದುಗೆ ಏರಲು ಷಡ್ಯಂತ್ರ ರೂಪಿಸಿದ್ದ ಕಾಂಗ್ರೆಸ್, ಜೆಡಿಎಸ್‌ಗೆ ಮುಖಭಂಗ: ರದ್ದೇವಾಡಗಿ

ಕಲಬುರಗಿ: ವಿಪ್ ಉಲ್ಲಂಘಿಸಿ ಬೇರೆ ಪಕ್ಷಕ್ಕೆ ಅಡ್ಡ ಮತದಾನ ಮಾಡಿದ ಬಿಜೆಪಿ 9 ಮಂದಿ ಸದಸ್ಯರನ್ನು ಅನರ್ಹಗೊಳಿಸಲಾಗಿದೆ, ಈ ಮೂಲಕ ಜೇವರ್ಗಿ ಪುರಸಭೆ ಗದ್ದುಗೆ ಏರುವ ಸಲುವಾಗಿ ಷಡ್ಯಂತ್ರ ರೂಪಿಸಿದ್ದ ಕಾಂಗ್ರೆಸ್, ಜೆಡಿಎಸ್ ಗೆ ಭಾರೀ ಮುಖಭಂಗವಾಗಿದೆ ಎಂದು ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇವರ್ಗಿ ಜೆಡಿಎಸ್ ಮುಖಂಡ ದೊಡ್ಡಪ್ಪಗೌಡ ಪಾಟೀಲ್ ಅವರು ಕಾಂಗ್ರೆಸ್ ಜೊತೆಗೂಡಿ ಬಿಜೆಪಿಯ ಶಕ್ತಿಯನ್ನು ಕುಂದಿಸಲು ಹಲವು ಪ್ರಯತ್ನಗಳನ್ನು ಮಾಡಿದ್ದಾರೆ, ಬಿಜೆಪಿ ಪುರಸಭೆ ಸದಸ್ಯರನ್ನು ಆಮಿಷಯೊಡ್ಡಿ ತಮ್ಮತ್ತ ಸೆಳೆದು ಅಧಿಕಾರಕ್ಕೆ ಏರಿದ್ದಾರೆ, ಇದೀಗ ಆ ಸದಸ್ಯರನ್ನು ಜಿಲ್ಲಾಧಿಕಾರಿಗಳು ಅನರ್ಹಗೊಳಿಸಿದ್ದು, ಅವರು ಇನ್ಮುಂದೆ 6 ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಇದು ಬಿಜೆಪಿಯ ಗೆಲುವಾಗಿದೆ ಎಂದರು.
ಬಿಜೆಪಿ ಪಕ್ಷದ ಪುರಸಭಾ ಸದಸ್ಯರು ಅಡ್ಡ ಮತದಾನ ಮಾಡಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ, ಈ ಕುರಿತು ನಾವು ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೆವು. ಕಾನೂನು ಪ್ರಕಾರ 2 ತಿಂಗಳ ಒಳಗಾಗಿ ಬಗೆಹರಿಸಬೇಕಿತ್ತು. ಆದರೆ ಜಿಲ್ಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಂಸದ ಡಾ.ಉಮೇಶ್ ಜಾಧವ್ ಮಾತನಾಡಿ, ಜಿಲ್ಲೆಯಲ್ಲಿ ಕಬ್ಬು ಬೆಳೆದಿರುವ ರೈತರು ಸಂಕಷ್ಟದಲ್ಲಿದ್ದಾರೆ. ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಜನ್ಮ ದಿನದಂದೇ ಪ್ರತಿ ಟನ್ ಕಬ್ಬಿಗೆ 3,300 ರೂ. ಘೋಷಿಸುವ ಮೂಲಕ ಜಿಲ್ಲೆಯ ರೈತ ಬಾಂಧವರಿಗೆ ಬರ್ತ್ ಡೇ ಗಿಫ್ಟ್ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಉಮೇಶ್ ಪಾಟೀಲ್, ಸಂತೋಷ್ ಹಾದಿಮನಿ, ದೇವೇಂದ್ರ ಮುತಕೋಡ, ಸಚಿನ್ ಕಡಗಂಚಿ ಸೇರಿದಂತೆ ಇತರರು ಉಪಸ್ಥಿತರಿದ್ದರು.







