KALABURAGI | ಜೇವರ್ಗಿ ರಸ್ತೆ ಅಪಘಾತ: ಮೃತರ ಸಂಖ್ಯೆ 4ಕ್ಕೆ ಏರಿಕೆ

ಕಲಬುರಗಿ: ಜೇವರ್ಗಿಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತ(Fatal Accident)ದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ(Mahantesh Beelagi) ಸೇರಿದಂತೆ ಮೂವರು ಮೃತಪಟ್ಟಿದ್ದರು, ಇದೀಗ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಹಾಂತೇಶ್ ಬೀಳಗಿಯವರ ಸ್ನೇಹಿತರಾಗಿರುವ ಬೆಳಗಾವಿ ಮೂಲದ ಈರಣ್ಣ ಸಿರಸಂಗಿ(62) ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಇದರೊಂದಿಗೆ ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಇದೇ ವೇಳೆಯಲ್ಲೇ ಗಾಯಗೊಂಡಿದ್ದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಹಾಂತೇಶ್ ಬೀಳಗಿ ಸೇರಿದಂತೆ ಐವರು ಮಂಗಳವಾರ ಸಂಜೆ ಇನ್ನೋವಾ ಕಾರಿನಲ್ಲಿ ಬೆಳಗಾವಿಯಿಂದ ಕಲಬುರಗಿ ಕಡೆಗೆ ವಿವಾಹ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿತ್ತು. ಇದರಿಂದ ಶಂಕರ ಬೀಳಗಿ ಹಾಗೂ ಈರಣ್ಣ ಬೀಳಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಐಎಎಸ್್ ಅಧಿಕಾರಿ ಮಹಾಂತೇಶ್ ಬೀಳಗಿ ಕೊನೆಯುಸಿರೆಳೆದಿದ್ದರು.





