Kalaburagi | ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕೋರ್ ಕಮಿಟಿ ಸಭೆ : ಹತ್ತು ಪ್ರಮುಖ ನಿರ್ಣಯಗಳ ಅಂಗೀಕಾರ

ಕಲಬುರಗಿ: ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು 371(ಜೆ) ಕಲಂ ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕಾಲಮಿತಿಯ ನೀಲಿ ನಕ್ಷೆ ಸಿದ್ಧಪಡಿಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಒತ್ತಾಯಿಸಿದೆ.
ನಗರದ ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾ ಮನೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಿ, ಹತ್ತು ಪ್ರಮುಖ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ, 371(ಜೆ) ಕಲಂ ಜಾರಿಯಾದ ಬಳಿಕವೂ ಅದರ ಮೂಲ ಆಶಯಗಳು ಸಂಪೂರ್ಣವಾಗಿ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಸ್ಪಷ್ಟ ಧೋರಣೆ ಅನುಸರಿಸುತ್ತಿದ್ದು, ಸರ್ಕಾರ ಘೋಷಿಸಿರುವ ಪ್ರತ್ಯೇಕ ಸಚಿವಾಲಯದ ಸ್ಥಾಪನೆಯೂ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ಪ್ರೊ. ಆರ್.ಕೆ. ಹುಡುಗಿ ಹಾಗೂ ಪ್ರೊ. ಬಸವರಾಜ ಕುಮನೂರ್ ಮಾತನಾಡಿ, ಮಂಡಳಿಯ ಕಾರ್ಯವೈಖರಿ ಉದ್ದೇಶದಿಂದ ದಾರಿ ತಪ್ಪುತ್ತಿರುವುದು ಕಂಡುಬರುತ್ತಿದೆ. ಈ ಕುರಿತು ಪ್ರಾದೇಶಿಕ ಸಚಿವರಾದ ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಹಾಗೂ ಡಾ. ಶರಣಪ್ರಕಾಶ್ ಪಾಟೀಲ್ ಅವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪ್ರಕಾರ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು. ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ವಾರ್ಷಿಕ ಬಜೆಟ್ ಹಾಗೂ ಕೆಕೆಆರ್‌ಡಿಬಿ ಅನುದಾನವನ್ನು ಸಮನ್ವಯಗೊಳಿಸಿ 5ರಿಂದ 10 ವರ್ಷಗಳ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಲಾಯಿತು.
ಇದೇ ವೇಳೆ ಕಲ್ಯಾಣ ಪಥ ರಸ್ತೆ ಯೋಜನೆ ಪೂರ್ಣಗೊಳಿಸುವುದು, ಬೀದರ್‌ನಿಂದ ಬಳ್ಳಾರಿವರೆಗೆ ಚತುಷ್ಪಥ ರಸ್ತೆ ನಿರ್ಮಾಣ, ಬಸವಕಲ್ಯಾಣದಿಂದ ಬಾಗೇವಾಡಿವರೆಗೆ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ರಾಯಚೂರಿನಲ್ಲಿ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆ ಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಇದಲ್ಲದೆ, ಕೃಷ್ಣಾ ಯೋಜನೆಯನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ವಹಿಸಲು ರಾಜ್ಯ ಸರ್ಕಾರ ಒತ್ತಡ ಹೇರಬೇಕು. ಕಲಬುರಗಿಯಲ್ಲಿ ಐದು ಮೇಲ್ಸೇತುವೆಗಳ ನಿರ್ಮಾಣ, ಕಾರಂಜಾ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಈ ಭಾಗಕ್ಕೆ ಇನ್ನೂ ಕನಿಷ್ಠ ಐದು ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ನಿರ್ಣಯಗಳನ್ನು ಸಭೆ ಅಂಗೀಕರಿಸಿತು.
ಸಭೆಯಲ್ಲಿ ಸನಾವುಲ್ಲಾ, ಕೈಲಾಸನಾಥ ದೀಕ್ಷಿತ್, ಲಿಂಗರಾಜ ಸಿರಗಾಪುರ, ಸಂಧ್ಯಾರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕೆಕೆಆರ್‌ಡಿಬಿಯ ಕೆಲವು ಧೋರಣೆಗಳು ಅಡ್ಡಿಯಾಗುತ್ತಿವೆ. ನೂತನ ಸರ್ಕಾರವು ಕೇವಲ ಭರವಸೆ ನೀಡದೆ, ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ವಿಳಂಬ ಮಾಡದೆ ತಕ್ಷಣ ಅನುಷ್ಠಾನಕ್ಕೆ ತರಬೇಕು. ಈ ನಿಟ್ಟಿನಲ್ಲಿ ಪ್ರಾದೇಶಿಕ ಸಚಿವರು ಗಂಭೀರವಾಗಿ ಕಾರ್ಯನಿರ್ವಹಿಸಬೇಕು.
-ಡಾ. ಲಕ್ಷ್ಮಣ ದಸ್ತಿ, ಸಂಸ್ಥಾಪಕ ಅಧ್ಯಕ್ಷ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ
ಜೂ.13ಕ್ಕೆ ಏಳು ಜಿಲ್ಲೆಗಳ ಪ್ರಮುಖರ ಸಭೆ
371(ಜೆ) ಕಲಂ ಕುರಿತು ಪ್ರಾದೇಶಿಕ ಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕಲಬುರಗಿ ಸೇರಿದಂತೆ ಏಳು ಜಿಲ್ಲೆಗಳ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುವುದು. ಜಾಗೃತಿ ಅಭಿಯಾನದ ಸಿದ್ಧತೆ ಕುರಿತು ಚರ್ಚಿಸಲು ಜೂನ್ 13ರಂದು ಏಳು ಜಿಲ್ಲೆಗಳ ಪ್ರಮುಖರ ಮಹತ್ವದ ಸಭೆ ನಡೆಸಲು ಸಮಿತಿ ನಿರ್ಧರಿಸಿದೆ.






