ಕಲಬುರಗಿ | ಡಾ.ಶರಣಬಸಪ್ಪ ಅಪ್ಪರಿಗೆ ಪದ್ಮ ವಿಭೂಷಣ ನೀಡುವಂತೆ ಕಲ್ಯಾಣ ನಾಡು ವಿಕಾಸ ವೇದಿಕೆಯಿಂದ ಆಗ್ರಹ

ಕಲಬುರಗಿ: ಇತೀಚೆಗೆ ನಿಧನರಾದ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಲಿಂಗೈಕ್ಯ ಡಾ.ಶರಣಬಸಪ್ಪ ಅಪ್ಪಾಜಿಯವರ ಸಾಮಾಜಿಕ ಸೇವೆ ಮತ್ತು ತ್ರೀವಿಧ ದಾಸೋಹ ಸೇವೆಯನ್ನು ಗುರುತಿಸಿ ಅವರಿಗೆ ಭಾರತ ಸರ್ಕಾರವು ಪದ್ಮವಿಭೂಷಣ ಮತ್ತು ರಾಜ್ಯ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಗಳನ್ನು ನೀಡಬೇಕೆಂದು ಕಲ್ಯಾಣ ನಾಡು ವಿಕಾಸ ವೇದಿಕೆ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮನವಿ ಪತ್ರ ಸಲ್ಲಿಸಿ, ಒತ್ತಾಯಿಸಲಾಯಿತು.
ಸೂಫಿ ಶರಣರ ನಾಡು ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನವು ಕಲಬುರಗಿ ಜಿಲ್ಲೆಯಲ್ಲಿ ತ್ರಿವಿಧ ದಾಸೋಹ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಭಾವೈಕ್ಯತೆಯ ನಾಡಾಗಲು ಶ್ರೀ ಶರಣಬಸಶ್ವೇಶ್ವರ ಸಂಸ್ಥಾನ ಮತ್ತು ಖ್ವಾಜಾ ಬಂದೇ ನವಾಝ್ ಸಂಸ್ಥಾನಗಳು ಮಾಡಿರುವ ಸೇವೆಗಳು ಅನನ್ಯ. ಡಾ.ಶರಣಬಸಪ್ಪ ಅಪ್ಪರವರು ಅನ್ನ, ಅಕ್ಷರ ಮತ್ತು ಕಾಯಕ ಎಂಬ ತ್ರಿವಿಧ ದಾಸೋಹ ಪರಂಪರೆಯನ್ನು ಯಾವುದೇ ಅಪೇಕ್ಷೆ ಇಲ್ಲದೆ ಜೀವನದುದ್ದಕ್ಕೂ ಸಮಾಜ ಸೇವೆಯ ರೂಪದಲ್ಲಿ ಮಾಡಿಕೊಂಡು ಬಂದಿದ್ದರು. ಶಿಕ್ಷಣ ಪ್ರೇಮಿಯಾಗಿದ್ದ ಅಪ್ಪಾಜಿಯವರು ಎಲ್ ಕೆ ಜಿ, ಯಿಂದ ಉನ್ನತ ಶಿಕ್ಷಣ ಕೇಂದ್ರವಾದ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಅಕ್ಷರ ದಾಸೋಹ ನೀಡುತ್ತಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ, ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ಜನ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಥಾನ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ನೀಡಲಾಗಿದ್ದು, ಇದು ಕಾಯಕ ದಾಸೋಹಕ್ಕೆ ಅವರು ನೀಡಿರುವ ಕೊಡುಗೆಯಾಗಿದೆ. ಹಾಗಾಗಿ ಸರಕಾರಗಳು ನೀಡುವ ಪ್ರಶಸ್ತಿಗೆ ಇವರು ವ್ಯಕ್ತಿಯಾಗಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಭಾಗದ ದೊಡ್ಡ ಶಕ್ತಿಯಾಗಿದ್ದ ಅಪ್ಪಾಜಿಯವರ ಸಾಮಾಜಿಕ ಸೇವೆ ಮತ್ತು ತ್ರಿವಿಧ ದಾಸೋಹ ಸೇವೆಗಳ ಸ್ಮರಣೆಯು ಕೇವಲ ಸಂತಾಪಕ್ಕೆ ಸೀಮಿತವಾಗಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿಗೆ ಪ್ರಶಸ್ತಿ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸಬಾರದು. ನಮ್ಮ ಭಾಗಕ್ಕೆ ಗೌರವ ನೀಡುವುದಾದರೆ ಅಪ್ಪ ಅವರಿಗೆ ಪ್ರಶಸ್ತಿ ಘೋಷಿಸಲಿ ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್ ನಡಗೇರಿ, ಜಿಲ್ಲಾ ಅಧ್ಯಕ್ಷ ಬಾಬು ಮದನಕರ ಮುಖಂಡರಾದ ಜೈಭೀಮ ಮಾಳಗೆ, ಮೋಹನ ಸಾಗರ, ಪ್ರವೀಣ ಖೇಮನ, ನಾಗು ಡೊಂಗರಗಾಂವ, ಮಲ್ಲು ಸಂಕನ, ದತ್ತು ಜಮಾದಾರ, ಪುಟ್ಟು ಸಿರಸಗಿ ಸೇರಿದಂತೆ ಇತರರಿದ್ದರು.







