Kalaburagi | ಕಮಲಾಪುರದ ಚೊಚ್ಚಲ ‘ಪ್ರಜಾ ಸೇವೆ’ ಸಭೆ ಯಶಸ್ವಿ; 1,061 ಅರ್ಜಿ ಸ್ವೀಕಾರ
ತ್ವರಿತಗತಿಯಲ್ಲಿ ವಿಲೇವಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

ಕಲಬುರಗಿ: ಜಿಲ್ಲೆಯ ಕಮಲಾಪುರದಲ್ಲಿ ಶನಿವಾರ ರಾಜ್ಯದ ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಬಸವರಾಜ ಮತ್ತಿಮೂಡ ಅವರ ಅಧ್ಯಕ್ಷತೆಯಲ್ಲಿ ನಡೆದ ಚೊಚ್ಚಲ ‘ಪ್ರಜಾ ಸೇವೆ’ ಸಭೆ ಯಶಸ್ವಿಯಾಗಿದ್ದು, ವಿವಿಧ ಇಲಾಖೆಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಒಟ್ಟು 1,061 ಅರ್ಜಿಗಳು ಸಲ್ಲಿಕೆಯಾಗಿವೆ.
‘ಅಹವಾಲು ನಿಮ್ಮದು, ಪರಿಹಾರ ನಮ್ಮದು’ ಎಂಬ ಧ್ಯೇಯದೊಂದಿಗೆ ಆಯೋಜಿಸಿದ್ದ ಪ್ರಜಾ ಸೇವೆ ಸಭೆಗೆ ದೂರು–ದುಮ್ಮಾನಗಳನ್ನು ಹೊತ್ತುಕೊಂಡು ಬಂದ ನೂರಾರು ಸಾರ್ವಜನಿಕರ ಸಮಸ್ಯೆಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಬಸವರಾಜ ಮತ್ತಿಮೂಡ ಶಾಂತಚಿತ್ತದಿಂದ ಆಲಿಸಿದರು. ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು, ವಿಶೇಷಚೇತನರು ಸೇರಿದಂತೆ ಎಲ್ಲ ವರ್ಗದ ಜನರ ಸಮಸ್ಯೆಗಳಿಗೆ ಕಿವಿಗೊಡುವ ಮೂಲಕ ಇದು ‘ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ’ ಎಂಬುದನ್ನು ನಿರೂಪಿಸಿದರು.
ಸಭೆಯಲ್ಲಿ ಸ್ವೀಕರಿಸಲಾದ ಎಲ್ಲ ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು. ಸರ್ಕಾರದ ಆದೇಶದಂತೆ ಪ್ರತಿ ಬುಧವಾರ ಅರ್ಜಿಗಳನ್ನು ತಹಶೀಲ್ದಾರ್, ಸಹಾಯಕ ಆಯುಕ್ತ ಹಾಗೂ ಜಿಲ್ಲಾಧಿಕಾರಿ ಹಂತದಲ್ಲಿ ಪರಿಶೀಲಿಸಿ ವಿಲೇವಾರಿ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಅರ್ಜಿದಾರರಿಗೆ ಕಾರಣ ಸಹಿತ ಹಿಂಬರಹ ನೀಡಬೇಕು ಎಂದು ನಿರ್ದೇಶನ ನೀಡಿದರು.
ಕಂದಾಯ ಇಲಾಖೆಗೆ 526 ಅರ್ಜಿ :
ಪ್ರಜಾ ಸೇವೆ ಸಭೆಯಲ್ಲಿ ಸ್ವೀಕರಿಸಲಾದ 1,061 ಅರ್ಜಿಗಳ ಪೈಕಿ ಕಂದಾಯ ಇಲಾಖೆಗೆ ಸಂಬಂಧಿಸಿದ 526 ಅರ್ಜಿಗಳು ಸಲ್ಲಿಕೆಯಾಗಿವೆ.
ಉಳಿದಂತೆ ವಸತಿ ಇಲಾಖೆಗೆ 125, ಗ್ರಾಮೀಣಾಭಿವೃದ್ಧಿ ಇಲಾಖೆಗೆ 100, ಆಹಾರ ಇಲಾಖೆಗೆ 60, ಕೆಆರ್‌ಐಡಿಎಲ್‌ಗೆ 51, ಇಂಧನ ಇಲಾಖೆಗೆ 36, ಲೋಕೋಪಯೋಗಿ ಇಲಾಖೆಗೆ 31, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ 31, ಕೃಷಿ ಇಲಾಖೆಗೆ 21, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 19, ನೀರಾವರಿ ಇಲಾಖೆಗೆ 18, ಸಾರಿಗೆ ಇಲಾಖೆಗೆ 16, ನಗರಾಭಿವೃದ್ಧಿ ಇಲಾಖೆಗೆ 15 ಹಾಗೂ ಸಮಾಜ ಕಲ್ಯಾಣ ಇಲಾಖೆಗೆ 12 ಅರ್ಜಿಗಳು ಸಲ್ಲಿಕೆಯಾಗಿವೆ.
ಉಳಿದಂತೆ ಇತರ ಇಲಾಖೆಗಳಿಗೂ ಒಂದಂಕಿಯಲ್ಲಿ ಅರ್ಜಿಗಳು ಸ್ವೀಕೃತವಾಗಿವೆ.






