ಕಲಬುರಗಿ | ದಾಸಪರಂಪರೆಗೆ ಜನಮುಖಿ ಆಯಾಮ ನೀಡಿದವರು ಕನಕದಾಸರು: ಡಾ.ಗಾಂಧೀಜಿ ಮೊಳಕೆರೆ

ಕಲಬುರಗಿ: `ವ್ಯಾಸಕೂಟದ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿ ಗುರು ವ್ಯಾಸರಾಯರ ಸಹಕಾರದೊಂದಿಗೆ ದಾಸಕೂಟದ ಪರಂಪರೆಯಲ್ಲಿ ಶೂದ್ರ ಶಕ್ತಿಯನ್ನು ಅಭಿವ್ಯಕ್ತಿಗೊಳಿಸಿ, ಇಡೀ ದಾಸಪರಂಪರೆಗೆ ಜನಮುಖಿ ಆಯಾಮ ನೀಡಿದವರು ಕನಕದಾಸರು ಎಂದು ಇತಿಹಾಸ ಅಧ್ಯಾಪಕರಾದ ಡಾ.ಗಾಂಧೀಜಿ ಮೊಳಕೆರೆ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ. ಅಂಬೇಡ್ಕರ್ ಕಲಾ ವಾಣಿಜ್ಯ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕನಕ ಜಯಂತಿಯ ವಿಶೇಷ ಉಪನ್ಯಾಸದಲ್ಲಿ ಡಾ.ಗಾಂಧೀಜಿ ಮೊಳಕೆರೆ ಅವರು ಕನಕದಾಸರ ಬದುಕಿನ ವೃತ್ತಾಂತಗಳನ್ನು ವಿವರಿಸಿದರು.
ಕನ್ನಡ ವಿಭಾಗದ ಪ್ರಾದ್ಯಾಪಕರಾದ ಡಾ.ಅರುಣ್ ಜೋಳದ ಕೂಡ್ಲಿಗಿ ಮಾತನಾಡಿ, `ಕನಕದಾಸರು ವೈದಿಕ ಬ್ರಾಹ್ಮಣ ದಾಸರಿಂದ ಅಸ್ಪೃಶ್ಯತೆಯ ಆಚರಣೆಗೆ ನೊಂದಿದ್ದರು. ಹಾಗಾಗಿಯೆ ಅವರು ತಮ್ಮ ಕೀರ್ತನೆಯಲ್ಲಿ `ಆರಿಗಂಜೆನು ನಾನು’ ಎಂದಿದ್ದಾರೆ. ದಾಸಪರಂಪರೆಯಲ್ಲಿ ಎಲ್ಲರೂ ಹರಿ ಸರ್ವೋತ್ತಮ ಎನ್ನುವ ಕೀರ್ತನೆಯಲ್ಲಿಯೇ ಉಳಿದರೆ ಕನಕದಾಸರು ಕನ್ನಡದ ಬಹಳಮುಖ್ಯ ಕವಿಯಾಗಿ ಹೊರಹೊಮ್ಮಿದರು. ರಾಮಧಾನ್ಯ ಚರಿತೆಯಲ್ಲಿ ಬತ್ತ ಮತ್ತು ರಾಗಿಯ ಶ್ರೇಷ್ಠತೆಯ ವಾಗ್ವಾದವನ್ನು ಹುಟ್ಟುಹಾಕುತ್ತಾರೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಪ್ರೊ.ಸಿದ್ದಪ್ಪ ಎಂ.ಕಾಂತ ಅವರು ಕನಕದಾಸರು ರಾಗಿಯ ಮಹತ್ವ ಸಾರಿದ `ರಾಗಿ ತಂದೀರೆ ಬಿಕ್ಷಕೆ ರಾಗಿ ತಂದೀರೆ’ ಕೀರ್ತನೆಯನ್ನು ವಿಶ್ಲೇಷಣೆ ಮಾಡಿದರು.
ವೇದಿಕೆಯಲ್ಲಿ ಕಾಲೇಜಿನ ಐಕ್ಯುಎಸಿ ಸಂಚಾಲಕರಾದ ಡಾ.ಸಿದ್ದಾರ್ಥ ಮದನಕರ, ಹಿರಿಯ ಪ್ರಾಧ್ಯಾಪಕರಾದ ಡಾ. ನಿರ್ಮಲ ಸಿರಗಾಪುರ, ಶಿಲ್ಪಾ ಲಿಂಗದೆ, ದೊಡ್ಡಲಕ್ಷಿ ಉಪಸ್ಥಿತರಿದ್ದರು.
ಸಮಾಜಶಾಸ್ತ್ರ ಪ್ರಾದ್ಯಾಪಕರಾದ ಡಾ. ಸುದರ್ಶನ ಮದನಕರ ಸ್ವಾಗತಿಸಿದರು. ಡಾ.ಹರ್ಷವರ್ಧನ್ ನಿರೂಪಿಸಿದರು. ಡಾ.ಶಿವಕುಮಾರ್ ವಂದಿಸಿದರು.







