ಕಲಬುರಗಿ | ಮಳೆಯಿಂದ ಕಣಸೂರು ಸೇತುವೆ ಜಲಾವೃತ : ವಾಹನ ಸಂಚಾರ ಸ್ಥಗಿತ

ಕಲಬುರಗಿ: ಚಿತ್ತಾಪುರ ಹಾಗೂ ಕಾಳಗಿ ತಾಲೂಕುಗಳಿಂದ ಕಲಬುರಗಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಕಣಸೂರು ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ನೀರಿನ ಪ್ರಮಾಣ ಕಡಿಮೆಯಾದ ನಂತರ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಶಹಾಬಾದ್ ಉಪವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮುಲ್ಲಾಮಾರಿ ಜಲಾಶಯದಿಂದ ನೀರಿನ ಹೆಚ್ಚುವರಿ ಬಿಡುಗಡೆಯ ಪರಿಣಾಮ, ಚಿಂಚೋಳಿಯಿಂದ ಕಲಬುರಗಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯಭಾಗದಲ್ಲಿರುವ ಕಾಳಗಿಯ ಕಣಸೂರು ಸೇತುವೆ ಮತ್ತು ಚಿತ್ತಾಪುರ ಮಾರ್ಗದ ದಂಡೋತಿ ಹತ್ತಿರದ ಕಾಗಿಣಾ ಸೇತುವೆ ಜಲಾವೃತಗೊಂಡಿವೆ. ಪರಿಣಾಮವಾಗಿ ಈ ಮಾರ್ಗಗಳಲ್ಲಿನ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ನೀರಿನ ಪ್ರಮಾಣ ಕಡಿಮೆಯಾದ ನಂತರ ಸೇತುವೆಗಳ ಸಾಮರ್ಥ್ಯ ಹಾಗೂ ಮೇಲ್ಮೈ ರಸ್ತೆಯ ಸ್ಥಿತಿಯನ್ನು ಪರಿಶೀಲಿಸಲಾಗುವುದು. ಬಳಿಕ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಅಷ್ಟರ ತನಕ ಸಾರ್ವಜನಿಕರು ತಾಳ್ಮೆ ವಹಿಸಿ ಸಹಕರಿಸಬೇಕು ಎಂದು ಡಿವೈಎಸ್ಪಿ ಪಾಟೀಲ ತಿಳಿಸಿದ್ದಾರೆ.
ಸೇತುವೆ ಹತ್ತಿರ ಅಥವಾ ನದಿತೀರದಲ್ಲಿ ಸೆಲ್ಫಿ ತೆಗೆಯುವುದು, ನೀರಿಗೆ ಇಳಿಯುವುದು ಅಥವಾ ವಾಹನ ಹಾಯಿಸುವ ಹುಚ್ಚಾಟಗಳು ಜೀವಕ್ಕೆ ಅಪಾಯಕಾರಿಯಾಗಬಹುದು. ನೀರಿನ ಪ್ರಮಾಣ ಇಳಿಯುವವರೆಗೆ ಸಾಹಸ ಪ್ರಯತ್ನ ಮಾಡಬಾರದು, ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಬೇಕು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.







