Kalaburagi | ಕನ್ನಡ ನಮ್ಮ ಅಸ್ಮಿತೆ, ಸ್ವಾಭಿಮಾನದ ಪ್ರತೀಕ: ಪ್ರವೀಣ್ ಪಾಟೀಲ್ ಹರವಾಳ
ಯುವ ಕವಿಗೋಷ್ಠಿ, ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ

ಕಲಬುರಗಿ: “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ಕನ್ನಡಿಗನಾಗಿರು” ಎಂಬ ಮಂಕುತಿಮ್ಮನ ಕಗ್ಗದ ಸಾಲುಗಳು ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಸದಾ ಮೊಳಗುತ್ತಿರಬೇಕು. ಕನ್ನಡ ಕೇವಲ ವ್ಯವಹಾರದ ಮಾಧ್ಯಮ ಅಥವಾ ಭಾಷೆಯಲ್ಲ; ಅದು ನಮ್ಮ ಅಸ್ಮಿತೆ ಮತ್ತು ಸ್ವಾಭಿಮಾನದ ಪ್ರತೀಕ ಎಂದು ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಹೇಳಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿ ರವಿವಾರ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆಯ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ಕವಿಗೋಷ್ಠಿ, ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯುವ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ಎರಡು ಸಾವಿರ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಕನ್ನಡ ಭಾಷೆಯು ಸಮೃದ್ಧ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂಡಿದೆ. ಅನೇಕ ಹೋರಾಟಗಾರರ ತ್ಯಾಗ ಮತ್ತು ಪರಿಶ್ರಮದ ಫಲವಾಗಿ 1973ರಲ್ಲಿ ಮೈಸೂರು ರಾಜ್ಯಕ್ಕೆ ಅಧಿಕೃತವಾಗಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಇಂದಿನ ಕರ್ನಾಟಕದ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲ ಮಹನೀಯರ ಕೊಡುಗೆಯನ್ನು ಸ್ಮರಿಸಬೇಕು ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಹಾಗೂ ಜಾಗತಿಕ ಜ್ಞಾನಾರ್ಜನೆಗೆ ಇಂಗ್ಲಿಷ್ ಕಲಿಕೆ ಅನಿವಾರ್ಯ ಎಂಬುದನ್ನು ಅಲ್ಲಗಳೆಯಲಾಗದು. ಆದರೆ, ಆಧುನಿಕತೆಯ ಭರದಲ್ಲಿ ನಮ್ಮ ಮಾತೃಭಾಷೆಯನ್ನು ಮರೆಯಬಾರದು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಪ್ರಾಥಮಿಕ ಕರ್ತವ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೆಗಲತಿಪ್ಪಿ, ಕನ್ನಡ ನಾಡು ಇಂದಿಗೂ ಸುಸಂಸ್ಕೃತವಾಗಿ ಬೆಳೆಯಲು ಇಲ್ಲಿನ ಲೇಖಕರು, ಕವಿಗಳು ಹಾಗೂ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಅವರ ಬರಹಗಳು ಮತ್ತು ಆದರ್ಶಗಳನ್ನು ಇಂದಿನ ಯುವಪೀಳಿಗೆ ಹಾಗೂ ಜನಸಾಮಾನ್ಯರಿಗೆ ತಲುಪಿಸುವ ಅಗತ್ಯವಿದೆ. ಕನ್ನಡದ ಹಿರಿಮೆಯನ್ನು ಸಾರುವ ಕವಿಗಳು ಮತ್ತು ನಾಡಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ನಿಸ್ವಾರ್ಥ ವ್ಯಕ್ತಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಂಘದ ಕಾರ್ಯದರ್ಶಿ ಬಸವರಾಜ ತೋಟದ ಪ್ರಾಸ್ತಾವಿಕವಾಗಿ ಮಾತನಾಡಿ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ನಾಡಿನ ಅಸ್ಮಿತೆಯನ್ನು ಎತ್ತಿಹಿಡಿಯುವುದರ ಜತೆಗೆ ಬಡ ಕಲಾವಿದರನ್ನು ಪ್ರೋತ್ಸಾಹಿಸುವ ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.
ಪತ್ರಕರ್ತ ದಸ್ತಗೀರ ನದಾಫ್ ಸೇರಿದಂತೆ ಹಲವು ಕವಿಗಳು ತಮ್ಮ ಕವನಗಳನ್ನು ವಾಚಿಸಿ ಗಮನ ಸೆಳೆದರು.
71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಯುವ ಕವಿಗೋಷ್ಠಿ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಯುವ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಬುರಾವ ಕೊಬಾಳ, ಅರವಿಂದ ಎಚ್. ಕಟ್ಟಿ, ಮಲ್ಲಪ್ಪ ಹೊಸಮನಿ, ಡಾ. ವೈಜನಾಥ ಸಿದ್ದಣ್ಣ ಮಮ್ಮಾಣಿ, ಮಂಜು ಶಾಸ್ತ್ರೀ, ಸಿದ್ಧಾರ್ಥ ರಂಗನೂರು, ಶರಣಪ್ಪ ಸಿಂಪಿ ಸೇರಿದಂತೆ ಹಿರಿಯ ಕಲಾವಿದರು, ಕವಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






