ಕಲಬುರಗಿ| ಕರ್ನಾಟಕ ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾಗಿ ಚಂದ್ರಶಾ ಎನ್. ಗಾಯಕವಾಡ ನೇಮಕ

ಆಳಂದ: ಕರ್ನಾಟಕ ಬಹುಜನ ಜಾಗೃತಿ ವೇದಿಕೆಯಿಂದ ನಡೆದ ಕಾರ್ಯಕರ್ತರ ಮಹತ್ವದ ಸಭೆಯಲ್ಲಿ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚಂದ್ರಶಾ ಎನ್.ಗಾಯಕವಾಡ ಅವರನ್ನು ಜಿಲ್ಲೆಯ ಅಧ್ಯಕ್ಷರಾಗಿ ಅಧಿಕೃತವಾಗಿ ನೇಮಕ ಮಾಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ದತ್ತಾತ್ರೆಯ ಎಸ್. ಕಟ್ಟಿಮನಿ ಅವರು, ಬಹುಜನರ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಂವಿಧಾನಾತ್ಮಕ ಮೌಲ್ಯಗಳ ಅನುಷ್ಠಾನಕ್ಕಾಗಿ ವೇದಿಕೆ ನಿರಂತರ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.
ಸಂಘಟನೆ ನೆಲಮಟ್ಟದಲ್ಲಿ ಬಲಿಷ್ಠವಾಗಬೇಕಾದ ಅಗತ್ಯವಿದ್ದು, ಅದಕ್ಕಾಗಿ ಸಮರ್ಪಿತ ಹಾಗೂ ಹೋರಾಟದ ಮನೋಭಾವ ಹೊಂದಿರುವ ನಾಯಕತ್ವ ಅವಶ್ಯಕ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜೀವನ್ ಕುಮಾರ್ ಎನ್. ವಾಘ್ಮಾರೆ ಸೇರಿದಂತೆ ಇತರ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಚನ್ನವೀರ ಕಾಳಕಿಂಗೆ, ದಶವಂತ ಬಿ.ಕಣಮಸಕರ್, ಟೈಗರ್ ವಿಗ್ನಶ್ವರ್, ಗೌತಮ ಕಾಂಬಳೆ, ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ ಥಂಬೆ, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಉದಯಕುಮಾರ ಬಿ. ಬಣಗೆ, ರಾಜ್ಯ ಯುವ ಅಧ್ಯಕ್ಷ ಸಂತೋಷ ಪಾಳಾ, ಡಿಸಿಸಿ ನಿರ್ದೇಶಕ ಪಂಡಿತ ನಡಗೇರಿ, ಮಲ್ಲು ಅಟ್ಟೂರ, ಆಕಾಶ ಸಿಂಧೆ, ಗೌರಿಶಂಕರ್ ಕೆ.ಕೆ.ನಗರ ಮತ್ತು ಸಿದ್ಧಾರ್ಥ ವಿ. ದಾಂಬ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.







