ಕಲಬುರಗಿ| ಪ್ರಗತಿಪರ ಡಿಜಿಟಲ್ ಪತ್ರಕರ್ತರ ಸಂಘದಿಂದ ವಿವಿಧ ಕ್ಷೇತ್ರದ 210 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: ಕರ್ನಾಟಕ ಪ್ರಗತಿಪರ ಡಿಜಿಟಲ್ ಮೀಡಿಯಾ ಪತ್ರಕರ್ತರ ಕಲ್ಯಾಣ ಸಂಘದ ವತಿಯಿಂದ 71ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಗರದ ಡಿಜಿಟಲ್ ಪತ್ರಿಕಾ ಭವನದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಗೆ ಕೊಡುಗೆ ನೀಡಿದ 210 ಸಾಧಕರನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಹಿರಿಯ ಸಾಹಿತಿ ಡಾ. ಸ್ವಾಮಿ ರಾವ್ ಕುಲಕರ್ಣಿ ಸೇರಿದಂತೆ ಗಣ್ಯರು ಕಾರ್ಯಕ್ರಮಕ್ಕೆ ಮೆರುಗು ತಂದರು.
ಸಂಘದ ರಾಜ್ಯಾಧ್ಯಕ್ಷ ಎಂ.ಡಿ. ಸದ್ದಾಮ್ ಹುಸೇನಿ ಮಾತನಾಡಿ, ಕನ್ನಡ ನೆಲ, ಜಲ ಹಾಗೂ ಅಭಿವೃದ್ಧಿಗಾಗಿ ನಮ್ಮ ಸಂಘ ಮತ್ತು ಪತ್ರಕರ್ತರು ಸದಾ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಲಿದೆ. ಮೊದಲ ಬಾರಿಗೆ ಡಿಜಿಟಲ್ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ. ಕಾರ್ಯಕ್ರಮದಲ್ಲಿ 540ಕ್ಕೂ ಹೆಚ್ಚು ಜನರು ಭಾಗವಹಿಸಿರುವುದು ಸಂಘದ ಕಾರ್ಯಚಟುವಟಿಕೆಗಳಿಗೆ ದೊರೆತ ಬೆಂಬಲವನ್ನು ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಕನ್ನಡ ಜಾಗೃತಿ ಹಾಗೂ ನಾಡಿನ ಅಭಿವೃದ್ಧಿಗಾಗಿ ಸಂಘದ ಪದಾಧಿಕಾರಿಗಳು ಶ್ರಮಿಸಲಿದ್ದಾರೆ ಎಂದರು.
ಹಿರಿಯ ಗಾಯಕ ಜಸ್ವೀರ್ ಸಿಂಗ್ ಮತ್ತು ಅವರ ತಂಡ ಕನ್ನಡ ಗೀತೆಗಳನ್ನು ಹಾಡುವ ಮೂಲಕ ಕನ್ನಡ ಭಾಷೆ, ಕರ್ನಾಟಕದ ಇತಿಹಾಸ ಮತ್ತು ಪರಂಪರೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಕ್ರಮಲಿ ಸೌಕಾರ್, ಶಿವಕುಮಾರ್ ಬಿರಾದಾರ್, ತಾಜುದ್ದೀನ್, ರಾಜ್ಯ ಕಾರ್ಯದರ್ಶಿ ಇಮ್ರಾನ್ ಖಾನ್, ಖಜಾಂಚಿ ಚಂದ್ರಶೇಖರ ಬೆಳಮಗಿ, ಜಂಟಿ ಕಾರ್ಯದರ್ಶಿ ಶಿವಕುಮಾರ್ ಎಲ್ಡೆ, ಕಾರ್ಯದರ್ಶಿಗಳಾದ ರೆಹಮಾನ್, ನಯೀಮ್, ಸದಸ್ಯರಾದ ಮಹೇಶ್ ಚವಾಣ್, ಅಮ್ಜದ್ ಖಾನ್, ನಬಿ ಪಟೇಲ್, ಕಲಬುರಗಿ ಜಿಲ್ಲಾಧ್ಯಕ್ಷ ಸಂತೋಷ್ ಜಮಾದಾರ್, ನಗರ ಅಧ್ಯಕ್ಷ ಅಯೂಬ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸಿದ್ದು ಹಿರೇಮಠ, ಆಂದೋಲ ಶ್ರೀಗಳು, ಪಾಳಾ ಶ್ರೀಗಳು, ಚಂದ್ರಶೇಖರ ಹಿರೇಮಠ, ಹೋರಾಟಗಾರರು ಹಾಗೂ ಡಾ. ಫೈಸಲ್ ಸಿದ್ದಿಕಿ ಉಪಸ್ಥಿತರಿದ್ದರು. ಕಲಬುರಗಿಯ ರಾಜಕೀಯ ಮುಖಂಡರು, ಹೋರಾಟಗಾರರು ಹಾಗೂ ಪತ್ರಕರ್ತರು ಭಾಗವಹಿಸಿದ್ದರು.






